ಮಡಿಕೇರಿ: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಡೈರಿ ಆರಂಭವಾಗಿದ್ದೇ ಕೊಡಗು (Kodagu) ಜಿಲ್ಲೆಯ ಕೂಡಿಗೆಯಲ್ಲಿ. ಹಾಗೆಯೇ ಮೊಟ್ಟ ಮೊದಲ ಬಾರಿಗೆ ಮೇಕೆ ಹಾಲು ಉತ್ಪಾದನಾ ಘಟಕ (Goat Milk Production Unit) ಆರಂಭಿಸಲು ಡೈರಿಯನ್ನು ಇಲ್ಲಿ ತೆರೆಯಲಾಯಿತು. ಆದರೀಗ ಆ ಡೈರಿ ಆರಂಭವಾಗುವುದಕ್ಕೂ ಮೊದಲೇ ಕಾಡುಪಾಲಾಗಿದೆ. ಇದರಿಂದ ರೈತರಿಗೆ ಭಾರೀ ನಿರಾಸೆಯಾಗಿದೆ.
ಹೌದು. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿ 2018ರಲ್ಲೇ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮೇಕೆ ಸಾಕಾಣಿಕೆ ಮತ್ತು ಹಾಲು ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಆದಾದ ಬಳಿಕ ಹಂತ, ಹಂತವಾಗಿ ಕಾಮಗಾರಿ ಮುಗಿಸಿ 2023ರಲ್ಲಿ ಪೂರ್ಣಗೊಳಿಸಲಾಯಿತು. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೆ ಶಾಕ್ – ಟ್ರಾನ್ಸ್‌ಫಾರ್ಮರ್, ಜನರೇಟರ್ ಪರಿಶೀಲನೆ & ರಿನೀವಲ್ ಶುಲ್ಕ 3 ಪಟ್ಟು ಏರಿಕೆ!
ಮೇಕೆಗಳನ್ನು ಸಾಕಣೆ ಮಾಡಲು ಬೃಹತ್ ಶೆಡ್‌ಗಳನ್ನ ನಿರ್ಮಿಸಲಾಗಿದೆ. ಅಲ್ಲದೇ ಮೇಕೆಗಳನ್ನು ಮೇಯಿಸುವುದಕ್ಕೆ ಬರೋಬ್ಬರಿ 30 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಜೊತೆಗೆ ಕೊಳವೆ ಬಾವಿಗಳನ್ನು ಕೊರೆದು ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಇಲ್ಲಿಗೆ ಮೇಕೆಗಳನ್ನೇ ಕೊಟ್ಟಿಲ್ಲ. ಮೇಕೆಗಳನ್ನು ಕೊಡುವ ಮಾತಿರಲಿ, ಡೈರಿಯನ್ನು ಆರಂಭಿಸಿದ ಮೇಲೆ ಅಗತ್ಯ ಸಿಬ್ಬಂದಿಯನ್ನೂ ನೇಮಕ ಮಾಡಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಒಬ್ಬರೇ ಒಬ್ಬರು ಡಿ-ಗ್ರೂಪ್ ಸಿಬ್ಬಂದಿ ನೇಮಿಸಿಕೊಂಡಿರುವುದು ಬಿಟ್ಟರೇ ಇನ್ನುಳಿದ ಯಾವ ಸಿಬ್ಬಂದಿಯ ನೇಮಕವೂ ಆಗಿಲ್ಲ. 2022-23 ರಲ್ಲಿ ಹಾಲು ಉತ್ಪಾದನಾ ಘಟಕದಲ್ಲಿ ಹಾಲು ಶುದ್ಧೀಕರಣ ಯಂತ್ರಗಳನ್ನು ಅಳವಡಿಲಾಗಿತ್ತು. ಸಮರ್ಪಕವಾಗಿ ಬಳಕೆ ಮಾಡದ ಕಾರಣ ಅವೆಲ್ಲವೂ ಈಗ ತುಕ್ಕು ಹಿಡಿದು ಹಾಳಾಗಿ ಹೋಗುತ್ತಿವೆ. ಇದನ್ನೂ ಓದಿ: ನಾಳೆಯಿಂದ ದುನಿಯಾ ದುಬಾರಿ – ಹಾಲು, ಮೊಸರು ದುಬಾರಿ.. ಕಸಕ್ಕೂ ಕಾಸು, ಯಾವುದಕ್ಕೆ ಎಷ್ಟು ದರ ಹೆಚ್ಚಳ?
ಹಾಲು ಶೇಖರಣೆಯಾಗುವ ಟ್ಯಾಂಕ್‌ಗಳಲ್ಲಿ ಹಳೇ ಪ್ಲಾಸ್ಟಿಕ್ ಬಾಟಲ್, ಕಸ, ಕಡ್ಡಿಗಳು ತುಂಬಿ ಹೋಗಿವೆ. ಅಷ್ಟಕ್ಕೂ ಈ ಮೇಕೆ ಸಾಕಾಣಿಕೆ ಮತ್ತು ಹಾಲು ಉತ್ಪಾದನಾ ಘಟಕ ಆರಂಭಿಸಿದ್ದೇ ಮೇಕೆ ಸಾಕಾಣಿಕೆದಾರರಿಗೆ ಅನುಕೂಲ ಮಾಡಬೇಕು ಎಂಬ ಉದ್ದೇಶದಿಂದ. ಮೇಕೆ ಹಾಲಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಮೇಕೆಗಳನ್ನು ಸಾಕುವವರಿಗೆ ಆದಾಯ ತಂದು ಕೊಡುವ ಜೊತೆಗೆ ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರವೇ ಆರಂಭಿಸಿದ್ದ ಮೇಕೆ ಸಾಕಾಣಿಕೆ ಮತ್ತು ಹಾಲು ಉತ್ಪಾದನಾ ಘಟಕ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಬಂದರೂ ನಿರ್ಲಕ್ಷ್ಯದಿಂದಾಗಿ ಕಾಡು ಪಾಲಾಗುತ್ತಿರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳನ್ನ ಕೇಳಿದ್ರೆ ತಾಂತ್ರಿಕ ಕಾರಣಗಳಿಂದ ಇನ್ನೂ ಕಟ್ಟಡ ಉದ್ಘಾಟನೆಗೊಂಡಿಲ್ಲ. ಆರು ತಿಂಗಳ ಒಳಗೆ ಎಲ್ಲಾ ರೀತಿಯ ವ್ಯವಸ್ಥೆಗಳು ಮಾಡಿಕೊಂಡು ಲೋಕಾರ್ಪಣೆ ಮಾಡಲಾಗುತ್ತದೆ ಎನ್ನುತ್ತಾರೆ. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!