ಹಾವೇರಿ: ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಜನರು ಮೈಮರೆತು ಓಡಾಡಬಾರದು. ಕೋವಿಡ್ ನಿಯಮಗಳನ್ನ ಪಾಲನೆ ಮಾಡಬೇಕು. ಜನರು ಲಾಕ್‍ಡೌನ್ ಮಾಡುವ ಪರಿಸ್ಥಿತಿ ತರಬಾರದು. ಒಂದು ವೇಳೆ ಕೊರೊನಾ ಕೇಸ್‍ಗಳು ಹೆಚ್ಚಾದರೆ ಲಾಕ್‍ಡೌನ್ ಮಾಡಬಹುದು ಎಂದರು. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್ ಪ್ರಧಾನಿ ರಾಜೀನಾಮೆ ಘೋಷಣೆ
ಕಾಂಗ್ರೆಸ್ ನಿಂದ ಮೇಕೆದಾಟು ಯೋಜನೆ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆ ವಿಚಾರದಲ್ಲಿ ಕಾಂಗ್ರೆಸ್ ನವರು ನಾಟಕ ಮಾಡುತ್ತಿದ್ದಾರೆ. ಈ ಯೋಜನೆ ಕಾರ್ಯಗತಗೊಳಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಯೋಜನೆ ಕಾರ್ಯಗತ ಮಾಡಲು ಬದ್ಧವಾಗಿದೆ ಅಂತಾ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್‍ನವರು ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‍ನವರು ಇದನ್ನ ಮಾಡುತ್ತಿದ್ದಾರೆ ಎಂದು ನುಡಿದರು. ಇದನ್ನೂ ಓದಿ: YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್
ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀರಾವರಿ ಮಂತ್ರಿಗಳಾಗಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಆಗ ಯಾರೂ ಕೂಡ ಮೇಕೆದಾಟು ಬಗ್ಗೆ ಮಾತನಾಡಲಿಲ್ಲ. ಮೇಕೆದಾಟು ಕಾರ್ಯಗತ ಮಾಡಲು ಮುಂದಾಗಲಿಲ್ಲ. ಆದರೆ ಈ ಯೋಜನೆ ಕಾರ್ಯಗತ ಮಾಡಲು ನಾವು ಬದ್ಧರಿರೋದಾಗಿ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದು ತಿಳಿಸಿದರು.