ಬೆಳಗಾವಿ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷೆಯ ಸದಸ್ಯರು ಪುಂಡಾಟ ನಡೆಸಿದ್ದು, ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಜಿ.ಪಂ ಸದಸ್ಯ ಜಯರಾಮ್ ದೇಸಾಯಿ ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಪಟ್ಟು ಹಿಡಿದರು. ಅಲ್ಲದೇ ಅಧಿಕಾರಿಗಳು ನಮ್ಮ ಮಾತು ಕೇಳದೇ ಭಾಷಾವಾದ ಮಾಡುತ್ತಿದ್ದಾರೆ. ನಮಗೆ ಕನ್ನಡದಲ್ಲಿ ಕೊಟ್ಟ ದಾಖಲೆಗಳು ತಿಳಿಯುತ್ತಿಲ್ಲ. ಅದ್ದರಿಂದ ಕೂಡಲೇ ಮರಾಠಿ ಭಾಷೆಯಲ್ಲಿ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲು ಒತ್ತಾಯ ಮಾಡಿದರು. ಆದರೆ ಅವರ ಇದನ್ನು ನಿರಾಕರಿಸಿದ ಅಧ್ಯಕ್ಷರು ಮರಾಠಿಯಲ್ಲಿ ದಾಖಲೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಏಕವಚನ ಪ್ರಯೋಗ:
ಈ ವೇಳೆ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಿಗೆ ಏಕವಚನದಲ್ಲಿ ಮಾತನಾಡಿ ಬಾಯಿಮುಚ್ಚಿ ಎಂದು ಮರಾಠಿ ಸದಸ್ಯೆ ಸರಸ್ವತಿ ಪಾಟೀಲ್ ಉದ್ಧಟತನ ಮೆರೆದರು. ತಮ್ಮ ವ್ಯಾಪ್ತಿಯಲ್ಲಿ ಒಂದು ವಾರದ ಹಿಂದೆ ಗ್ರಾಮಕ್ಕೆ ಚಿರತೆ ಬಂದಾಗ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದ ಸರಸ್ವತಿ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಉಪಾಧ್ಯಕ್ಷ ಅರುಣ ಕಟಾಂಬ್ಳೆ ಅವರಿಗೆ ಏಕವಚನದಲ್ಲಿ ಮಾತನಾಡಿ ಸರಸ್ವತಿ ಉದ್ಧಟನ ಮೆರೆದರು.
Advertisement
ಈ ಮಾತಿಗೆ ಆಕ್ರೋಶಗೊಂಡ ಕನ್ನಡ ಸದಸ್ಯರು ಸಭೆ ನಡುವೆಯೇ ಸರಸ್ವತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಉಪಾಧ್ಯಕ್ಷರನ್ನು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಈ ಕುರಿತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಮಧ್ಯಪ್ರವೇಶ ಮಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv