ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಹಲವು ವರ್ಷಗಳಿಂದ ಇದ್ದು ಆನೆಗಳ ದಾಳಿಯನ್ನು ತಡೆಯಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಅಷ್ಟಿಷ್ಟಲ್ಲ. ಆದರೆ ಸದ್ಯ ಅರಣ್ಯ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಈ ಮೂಲಕ ರೈತರ ಬೆಳೆ ರಕ್ಷಣೆ ಹೊಸ ತಂತ್ರ ಜಾರಿಗೆ ಸಿದ್ಧತೆ ನಡೆಸಿದೆ.
ಈ ಹಿಂದೆ ಅಳವಡಿಸಿದ್ದ ಸೋಲಾರ್ ಬೇಲಿ, ಕಂದಕ ನಿರ್ಮಾಣ ಕಾರ್ಯಗಳು ಅಷ್ಟು ಯಶಸ್ವಿಯಾಗಿ ಕಾಡಾನೆಗಳ ದಾಳಿಯನ್ನು ತಡೆಯಲು ವಿಫಲವಾಗಿತ್ತು. ಇದೀಗ ವಿದೇಶ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಸಕ್ಸಸ್ ಆಗಿರುವ ಸರಳ ಸಾಧನವನ್ನು ಜಿಲ್ಲೆಯಲ್ಲೂ ಅಳವಡಿಸುವ ಮೂಲಕ ಆನೆ ಕಾಟಕ್ಕೆ ನಿಯಂತ್ರಣ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. ಇದರ ಭಾಗವಾಗಿ ಜೇನು ಪೆಟ್ಟಿಗೆಗಳನ್ನು ಜಮೀನು ಬಳಿ ಕಟ್ಟುವ ಮೂಲಕ ಜೇನು ಬೇಲಿಯನ್ನು ನಿರ್ಮಿಸುವುದು ಈ ಹೊಸ ಪ್ರಯೋಗ.
Advertisement
Advertisement
ಜಿಲ್ಲೆಯ ಆಲೂರು-ಸಕಲೇಶಪುರ ತಾಲೂಕು ಸೇರಿದಂತೆ ಎಲ್ಲೆಲ್ಲಿ ಕಾಡಾನೆ ಹಾವಳಿ ಹಾಗೂ ಓಡಾಟ ಹೆಚ್ಚಾಗಿದೆಯೋ ಅಲ್ಲಿ, ಪ್ರಾಯೋಗಿಕವಾಗಿ ಜಮೀನು ಅಥವಾ ತೋಟದ ಸುತ್ತಮುತ್ತಾ ಈ ಜೇನುಪೆಟ್ಟಿಗೆ ಅಳವಡಿಸಲಾಗಿದೆ. ಪೆಟ್ಟಿಗೆಯಲ್ಲಿ ಜೇನುಹುಳ ಪೋಷಣೆ ಮಾಡಲಾಗುತ್ತದೆ. ತೋಟದ ಸುತ್ತ ಸಾಲಾಗಿ ಸ್ಥಳಾವಕಾಶ ಬಿಟ್ಟು ಅಳವಡಿಸಿರುವ ಜೇನುಪೆಟ್ಟಿಗಳಿಗೆ ಹಗ್ಗ ಕಟ್ಟಲಾಗಿದೆ. ಒಂದೊಮ್ಮೆ ಕಾಡಾನೆ ಬಂದು, ಹಗ್ಗವನ್ನು ಮುಟ್ಟಿದಾಗ ಪೆಟ್ಟಿಗೆಯೊಳಗಿದ್ದ ಜೇನುಹುಳಗಳ ಹಿಂಡು ಹೊರಬಂದು ಸದ್ದು ಮಾಡುತ್ತವೆ. ಈ ಸದ್ದಿಗೆ ಕಾಡಾನೆ ಹೆದರಿ ಯಾವುದೇ ನಷ್ಟಮಾಡದೇ ವಾಪಸ್ ಹೋಗುತ್ತವೆ.
Advertisement
ಈ ವಿಧಾನ ದೂರದ ಕೀನ್ಯಾ ದೇಶ, ನೆರೆಯ ಕೇರಳ ರಾಜ್ಯದಲ್ಲಿ ಸಕ್ಸಸ್ ಆದ ಹಿನ್ನೆಲೆಯಲ್ಲಿ ನಾವೂ ಆರಂಭಿಸುತ್ತೇವೆ ಎಂದು ಅರಣ್ಯಾಧಿಕಾರಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳಿಂದ ಆನೆ ಹಾವಳಿಯನ್ನು ತಡೆಯಲು ಸಾದ್ಯವಾಗಿಲ್ಲ, ಈಗ ಜೇನುಸಾಕಣೆ ಪೆಟ್ಟಿಗೆ ಯಶಸ್ವಿಯಾಗುವುದೋ ಗೊತ್ತಿಲ್ಲ ಎಂಬುವುದು ರೈತರ ಅನುಮಾನವಾಗಿದೆ. ಆದರೆ ಅರಣ್ಯ ಇಲಾಖೆಯ ಈ ತಂತ್ರ ಯಶಸ್ವಿಯಾದರೆ ಬೆಳೆ ರಕ್ಷಣೆ ಸಾಧ್ಯವಾಗಿ ರೈತರು ಉತ್ತಮ ಲಾಭ ಪಡೆಯಲಿದ್ದಾರೆ.