ಮನೆಯ ಬಳಿ ಹಾವು (Snake) ಕಾಣಿಸಿಕೊಳ್ಳೋದು ಹೊಸದಲ್ಲ. ಕೆಲವೊಂದು ಸಲ ಮನೆಯೊಳಗೇ ಉರಗಗಳ ಪ್ರವೇಶ ಆಗುತ್ತದೆ. ಬೇಸಿಗೆ ಸಮಯದಲ್ಲಂತೂ ತಣ್ಣನೆಯ ಜಾಗಗಳನ್ನ ಹುಡುಕುವ ಹಾವುಗಳು, ಮನೆಯ ಸಂದು, ಶೂ, ವಾಹನ ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ಅವಿತುಕೊಳ್ಳುತ್ತವೆ. ಹೀಗೆ ಹಾವುಗಳು ಮನೆಯೊಳಗೆ ಬಂದಾಗ ಜನ ಭೀತಿಗೊಳ್ಳುತ್ತಾರೆ. ಇಂತಹ ಹಲವು ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ ಆಗುತ್ತಿರುತ್ತದೆ.
ಹೀಗೆ ಹಾವುಗಳು ಮನೆಯೊಳಗೆ ಅಥವಾ ಮನೆ ಬಳಿ ಬಂದಾಗ ಅವುಗಳನ್ನ ಹೊಡೆದು ಸಾಯಿಸದೇ ಸುರಕ್ಷಿತವಾಗಿ ಹಿಡಿದು ರಕ್ಷಿಸುವುದು ಕೂಡಾ ಬಲು ಮುಖ್ಯ. ಆದರೆ, ಬಹುತೇಕ ಸಂದರ್ಭಗಳಲ್ಲಿ ಹಾವುಗಳ ಬಳಿ ಹೋಗಲು ಜನರು ಹೆದರುವುದರಿಂದ ಅವುಗಳನ್ನ ಹಿಡಿಯುವುದಕ್ಕೂ ಹಿಂಜರಿಯುತ್ತಾರೆ. ಕೆಲವರು ಹಾವನ್ನು ಸುರಕ್ಷಿತವಾಗಿ ಹಿಡಿಯುವುದು ಹೇಗೆ…? ಎಂದು ತಿಳಿದುಕೊಳ್ಳಲು ಇಂಟರ್‌ನೆಟ್ ಮೊರೆ ಹೋಗುವುದು ಕೂಡಾ ಇದೆ.
ಆದ್ರೆ ಇತರ ಹಾವುಗಳನ್ನ ಹಿಡಿಯೋದಕ್ಕೂ ಹಾಗೂ ಕಾಳಿಂಗ ಸರ್ಪ (King Cobra) ಹಿಡಿಯೋದಕ್ಕೂ ತುಂಬಾನೇ ವ್ಯತ್ಯಾಸ ಇದೆ. ಏಕೆಂದ್ರೆ ಕಾಳಿಂಗ ಸರ್ಪ ಹಿಡಿಯುವುದು ಅತ್ಯಂತ ಅಪಾಯಕಾರಿ ಕೆಲಸ. ತರಬೇತಿ ಪಡೆದ ವೃತ್ತಿಪರರು ಮಾತ್ರ ಹಿಡಿಯಬಹುದಾಗಿದೆ. ಕಾಳಿಂಗ ಸರ್ಪ ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದ್ದು, ಒಂದು ಸೆಕೆಂಡ್ ಯಾಮಾರಿದ್ರೂ ಜೀವವೇ ಹೋಗುತ್ತೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಕಾಳಿಂಗ ಸರ್ಪ ಹಿಡಿಯಬೇಕೆಂದ್ರೆ ಜನರು ಖಾಸಗಿ ಉರಗ ತಜ್ಞರನ್ನೇ ಅವಲಂಬಿಸಿದ್ದಾರೆ. ಆದರೀಗ ಕಾಳಿಂಗ ಸರ್ಪಗಳನ್ನ ಸುರಕ್ಷಿತವಾಗಿ ಸೆರೆ ಹಿಡಿಯಲು ಮತ್ತು ಕಾಡಿಗೆ ಬಿಡಲು ಅರಣ್ಯ ಇಲಾಖೆ (Forest Department) ಸಿಬ್ಬಂದಿಗೆ ತರಬೇತಿ ನೀಡಿ ವಿಶೇಷ ತಂಡ ರಚಿಸುವಂತೆ ಸರ್ಕಾರದಿಂದಲೇ ಸೂಚನೆ ನೀಡಲಾಗಿದೆ. ಆದ್ರೆ ಇದಕ್ಕೆ ಸರ್ಕಾರದಿಂದ ಯಾವ ರೀತಿ ತರಬೇತಿಗೆ ಅವಕಾಶ ಮಾಡಿಕೊಡುತ್ತೆ? ಈ ಯೋಜನೆ ಎಷ್ಟು ರೀತಿಯಲ್ಲಿ ಫಲಪ್ರದವಾಗುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
ಅಷ್ಟಕ್ಕೂ ಕಾಳಿಂಗ ಸರ್ಪ ಹಿಡಿಯೋಕೆ ವಿಶೇಷ ತರಬೇತಿ ಅಗತ್ಯವೇ? ಕರ್ನಾಟಕದಲ್ಲಿ ಇದು ಎಲ್ಲೆಲ್ಲಿ ಕಂಡುಬರುತ್ತದೆ? ರಾಜ್ಯದಲ್ಲಿ ಕಾಳಿಂಗ ಸರ್ಪ ಹೊರತುಪಡಿಸಿ ಇರುವ ವಿಷಕಾರಿ ಹಾವುಗಳು ಯಾವುವು ಅನ್ನೋದನ್ನ ತಿಳಿಯೋಣ… ಅದಕ್ಕೂ ಮುನ್ನ ಕಾಳಿಂಗ ಸರ್ಪ ಸುರಕ್ಷತೆ ಮುನ್ನೆಲೆಗೆ ಬಂದಿದ್ದು ಏಕೆ? ಈಶ್ವರ್ ಖಂಡ್ರೆ ಅವರು ನೀಡಿದ ಸೂಚನೆ ಏನು? ಎಂಬುದನ್ನ ಮೊದಲು ನೋಡೋಣ..
ಈಶ್ವರ್ ಖಂಡ್ರೆ ಕೊಟ್ಟ ಸೂಚನೆ ಏನು?
ಕೆಲ ದಿನಗಳ ಹಿಂದೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಜ್ಜಂಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ (Eshwar Khandre), ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪವನ್ನ ಸೆರೆ ಹಿಡಿಯಲು ವಿಶೇಷ ತಂಡ ರಚಿಸಬೇಕು. ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು, ಕಾಡಿಗೆ ಬಿಡಲು ಯಾವುದೇ ಖಾಸಗಿ ಸಂಸ್ಥೆಗಳ ಮೊರೆ ಹೋಗದೆ ಅರಣ್ಯ ಇಲಾಖೆಯ ವಿಭಾಗದ 5 ಸಿಬ್ಬಂದಿಗೆ ತರಬೇತಿ ನೀಡುವಂತೆ ಸೂಚನೆ ನೀಡಿದ್ದರು.
ಜನವಸತಿ ಪ್ರದೇಶ ಸೇರಿದಂತೆ ಮನೆಯೊಳಗೆ, ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗನಿಂದ ಸಾರ್ವಜನಿಕರಲ್ಲಿ ಭಯ ಮೂಡುತ್ತಿದೆ. ಇದಕ್ಕೆ ಪರಿಹಾರವಾಗಿ ಉರಗ ತಜ್ಞರು ಮತ್ತು ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸುವ ಅಗತ್ಯವಿಲ್ಲ. ಕಾಳಿಂಗ ಸರ್ಪ ಹಿಡಿಯಲು ಮತ್ತು ಸುರಕ್ಷಿತವಾಗಿ ಕಾಡಿಗೆ ಬಿಡಲು ನಮ್ಮದೇ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಒಬ್ಬ ಪ್ರಾದೇಶಿಕ ಅರಣ್ಯಾಧಿಕಾರಿಯೊಂದಿಗೆ ತರಬೇತಿ ಪಡೆದ 5 ಜನರ ತಂಡವನ್ನು ನೇಮಿಸಬೇಕು. ಈಗಾಗಲೆ ರಚಿಸಿರುವ ETF(Elephant task Force) ಮತ್ತು LTF (Leopard Task Force) ನಂತೆಯೇ ಕಾಳಿಂಗ ಸರ್ಪ ಹಿಡಿಯಲೂ ಒಂದು ತಂಡ (King Cobra Task Force) ರಚಿಸುವುದರಿಂದ ಸರ್ಪಗಳ ಸೆರೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನೂ ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದರು.
ಕರ್ನಾಟಕದಲ್ಲಿರುವ ವಿಷಕಾರಿ ಹಾವುಗಳು ಯಾವುದು?
ದೇಶದಲ್ಲಿ 300 ಹಾಗೂ ರಾಜ್ಯದಲ್ಲಿ 90 ಪ್ರಭೇದದ ಹಾವುಗಳು ಇರುವುದನ್ನ ಗುರುತಿಸಲಾಗಿದೆ. ಅವುಗಳಲ್ಲಿ 20 ಪ್ರಭೇದದ ಹಾವುಗಳು ಮಾತ್ರ ವಿಷಪೂರಿತ ಹಾವುಗಳಾಗಿವೆ. ಕರ್ನಾಟಕದಲ್ಲಿ ನಾಗರ ಹಾವು, ಕೊಳಕು ಮಂಡಲ, ಕಾಳಿಂಗ ಸರ್ಪ, ರಕ್ತ ಮಂಡಲ, ಕಟ್ ಹಾವು, ಕಾಳಿಂಗ ಸರ್ಪ, ಗರಗಸದ ಹಾವೂ ಹಾಗೂ ಸಮುದ್ರ ತೀರದಲ್ಲಿ ಕಂಡುಬರುವ ಕಡಲ ಹಾವು ಅಂತ್ಯ ವಿಷಕಾರಿ ಹಾವು ಎಂದು ಉರಗತಜ್ಞ ಸ್ನೇಕ್ ಶಾಮ್ ʻಪಬ್ಲಿಕ್ ಡಿಜಿಟಲ್ʼಗೆ ತಿಳಿಸಿದ್ದಾರೆ.
ಹಾವುಗಳ ಪ್ರಪಂಚ ಹೇಗಿರುತ್ತೆ?
ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆಬೆಳವಣಿಗೆಯಾಗುತ್ತದೆ. ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಮತ್ತು ಮೀಟಿಂಗ್ ಎರಡಕ್ಕೇನೇ. ಮೀಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತದೆ. ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವತನಕ ಕಾಯುತ್ತದೆ. ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರತ್ತೆ. ಮೊಟ್ಟೆ ಇಟ್ಟಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡ್ತವೆ. ಇನ್ನು ಕೆಲವು ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45-65ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ. ಎಲ್ಲ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕತ್ತೆ. ಅವು ಯಾವವೆಂದರೆ, ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತೆ ಮಂಡಲ ಹಾವು -ಈ ಮೂರು ಜಾತಿಯ ಹಾವುಗಳು ಮರಿ ಹಾಕತ್ತೆ. ಆದರೆ ಇವು ಸಸ್ತನಿ ಅಲ್ಲ. ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಡಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ. ಅಲ್ಲದೇ ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರುತ್ತವೆ. ತಮ್ಮ ಆಹಾರವನ್ನು ತಾವೇ ಹುಡುಕಿಕೊಂಡು ಹೋಗುತ್ತಿರುತ್ತವೆ ಎಂದು ಸ್ನೇಕ್ ಶ್ಯಾಮ್ ಹಾವುಗಳ ಸಂತಾನೋತ್ಪತ್ತಿಯ ಬಗ್ಗೆ ವಿವರಿಸಿದ್ದಾರೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಕಾಳಿಂಗ ಸರ್ಪ ಕಂಡುಬರುತ್ತೆ?
ಸಹಜವಾಗಿ ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಭಾಗಗಳಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆದ್ರೆ ಇದನ್ನ ಹಿಡಿಯೋದು ಅಷ್ಟು ಸುಲಭವಲ್ಲ ಎನ್ನುತ್ತಾರೆ ಉರಗ ತಜ್ಞ ಸ್ನೇಕ್ ಶ್ಯಾಮ್.
ವಿಶೇಷ ತರಬೇತಿ ಅಗತ್ಯವೇ?
ನಾಗರ ಹಾವುಗಳು ನಗರ ಪ್ರದೇಶದಲ್ಲಿ ಬೆಳೆಯುತ್ತವೆ. ಆದ್ರೆ, ಕಾಳಿಂಗ ಸರ್ಪ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ. ಆದ್ದರಿಂದ ಅವುಗಳನ್ನ ಹಿಡಿಯೋದಕ್ಕೆ ವಿಶೇಷ ತರಬೇತಿ ಅಗತ್ಯ. ಇದೆಲ್ಲದಕ್ಕಿಂತ ಮೊದಲು ಜೀವದ ಮೇಲಿನ ಆಸೆ ಬಿಡಬೇಕು. ಯಾವುದೇ ಕ್ಷಣದಲ್ಲೂ ಅನಾಹುತ ಆಗಬಹುದು, ಅದೂ ಅಲ್ಲದೇ ಕಾಳಿಂಗ ಸರ್ಪ ಕಚ್ಚಿದ್ರೆ 5 ನಿಮಿಷದಲ್ಲೇ ಜೀವ ಹೋಗುತ್ತೆ, ಅಷ್ಟೊಂದು ವಿಷಕಾರಿ ಅನ್ನೋದು ಸ್ನೇಕ್ ಶಾಮ್ ಅಭಿಪ್ರಾಯ.
ಅರಣ್ಯ ಇಲಾಖೆ ನಿರ್ಧಾರ ಸರಿಯೇ?
ಮುಖ್ಯವಾಗಿ ಹೆಬ್ಬಾವು, ಕಾಳಿಂಗ ಸರ್ಪ ಎಲ್ಲೇ ಹಿಡಿದರೂ ಅರಣ್ಯ ಇಲಾಖೆ ಸಮ್ಮುಖದಲ್ಲೇ ಹಿಡಿಯೋದು, ಅರಣ್ಯ ಇಲಾಖೆ ಸಮ್ಮುಖದಲ್ಲೇ ಕಾಡಿಗೆ ಬಿಡೋದು. ಕಾಳಿಂಗ ಸರ್ಪ ಸಂರಕ್ಷಣೆಗೆ ಅರಣ್ಯ ಇಲಾಖೆಯಿಂದಲೇ ತಂಡ ರಚನೆ ಮಾಡುತ್ತೆ ಅಂದ್ರೆ ಅದು ನಮಗೂ ಸಂತೋಷ. ಏಕೆಂದ್ರೆ ನಾವು 30-40 ವರ್ಷದಿಂದ ಹಾವುಗಳನ್ನ ಹಿಡಿಯುತ್ತಿದ್ದೇವೆ. ಮಧ್ಯರಾತ್ರಿ 1 ಗಂಟೆ, 2 ಗಂಟೆಗೆಲ್ಲ ಕರೆ ಬರುತ್ತೆ. ಅರಣ್ಯ ಇಲಾಖೆಯೇ ಆ ಕೆಲಸ ಮಾಡಿದ್ರೆ, ನಮಗೆ ಸಂತೋಷ. ನಾವು ನೆಮ್ಮದಿಯಿಂದ ನಿದ್ರೆ ಮಾಡಬಹುದು. ಆದ್ರೆ ಪ್ರತಿಯೊಂದು ಹಾವು ಹಿಡಿಯೋದಕ್ಕೆ ಅರಣ್ಯ ಇಲಾಖೆಯೇ ಬರುತ್ತೆ ಅಂದ್ರೆ ಕನಿಷ್ಠ ರಾಜ್ಯದಲ್ಲಿ 150 ರಿಂದ 200 ಸಿಬ್ಬಂದಿ ಬೇಕಾಗುತ್ತೆ ಎನ್ನುತ್ತಾರೆ ಸ್ನೇಕ್ ಶಾಮ್.
ಅದೇನೇ ಇರಲಿ… ಹಾವುಗಳು ಆಹಾರ ಸರಪಳಿಯ ಮುಖ್ಯ ಭಾಗ, ಪರಿಸರ ಸಮತೋಲನೆಯಲ್ಲಿ ಹಾವುಗಳ ಪಾತ್ರ ಬಹಳ ದೊಡ್ಡದು. ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಹಾವುಗಳು ಹಾಗೂ ವಿಷ ರಹಿತ ಹಾವುಗಳು ಸಾಕಷ್ಟಿವೆ. ಪ್ರತಿವರ್ಷ ಸಾವಿರಾರು ಜನರು ಹಾವು ಕಡಿತದಿಂದ ಸಾಯುತ್ತಾರೆ ಎನ್ನುವುದನ್ನ ವರದಿಗಳಲ್ಲಿ ನೋಡುತ್ತಲೇ ಇರುತ್ತೇವೆ. ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡರೂ ಬೆಂಬಲಿಸೋಣ ಎನ್ನುವುದು ತಜ್ಞರ ಆಶಯ.









