ನಕ್ಸಲ್ ನೆಲೆಯನ್ನ ಬೆಳಕಿಗೆ ತಂದ ಚೀರಮ್ಮ ಇನ್ನಿಲ್ಲ

Public TV
1 Min Read
CKM Chiramma

ಚಿಕ್ಕಮಗಳೂರು: ನಕ್ಸಲ್ ನೆಲೆಯನ್ನು ಬೆಳಕಿಗೆ ತಂದಿದ್ದ ಶತಾಯುಷಿ ಚೀರಮ್ಮ ಅವರು ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಜೇಡಿಹಟ್ಟಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಚೀರಮ್ಮ ಅವರ ಮೂಲಕವೇ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಬೇರು ಬಿಡುತ್ತಿದೆ ಎನ್ನುವುದು ಗೊತ್ತಾಗಿದ್ದು. ಶೃಂಗೇರಿ ತಾಲೂಕು ಮೆಣಸಿನ ಹಾಡ್ಯದಲ್ಲಿ ಚೀರಮ್ಮ 2002ರ ಫೆಬ್ರವರಿ 10 ರಂದು ಸೌದೆ ತರಲು ತಮ್ಮ ಮನೆ ಹಿಂಬದಿಯ ಕಾಡಿಗೆ ಹೋಗಿದ್ದರು. ಈ ವೇಳೆ ತರಬೇತಿ ಪಡೆಯುತ್ತಿದ್ದ ನಕ್ಸಲರು ಹಾರಿಸಿದ ಗುಂಡು ಆಕಸ್ಮಿಕವಾಗಿ ಚೀರಮ್ಮ ಅವರಿಗೆ ತಗುಲಿತ್ತು.

NAXAL

ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಚೀರಮ್ಮ ಕೂಳೆ ಚುಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು, ಚೀರಮ್ಮ ಅವರ ಕಾಲಿನಲ್ಲಿ ಗುಂಡು ತಗುಲಿದೆ ಎಂದು ಖಚಿತಪಡಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮೆಣಸಿನ ಹಾಡ್ಯದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವುದು ತಿಳಿದುಬಂದಿತ್ತು.

ಈ ಮೂಲಕ ಜಿಲ್ಲೆಯ ಮೊದಲ ನಕ್ಸಲ್ ಪ್ರಕರಣ ಜಯಪುರ ಠಾಣೆಯಲ್ಲಿ ದಾಖಲಾಗಿದ್ದು ಇದೀಗ ಇತಿಹಾಸ. ಇದಕ್ಕೆ ಪರೋಕ್ಷವಾಗಿ ಕಾರಣಕರ್ತರಾಗಿದ್ದ 100 ವರ್ಷದ ಚೀರಮ್ಮ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಚೀರಮ್ಮ ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *