ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ಅಭಿಷೇಕ್ ಬಸಂತ್ (Abhishek Basant) ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಳಾ ಪ್ರಧಾನ ಚಿತ್ರ ‘ಕ್ರೀಮ್’ (Kreem). ಸಂಯುಕ್ತಾ ಹೆಗ್ಡೆ (Samyuktha Hegde) ಈ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಅರುಣಸಾಗರ್ (Arun Sagar) ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿ.ಕೆ. ದೇವೇಂದ್ರ ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡದ ಸದಸ್ಯರು ಕ್ರೀಮ್ ಚಿತ್ರದ ಕುರಿತು ಮಾತನಾಡಿದರು. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಮಾಡಲು ನನಗೆ ರೋಷನ್ ಅವರು ಸೇರಿದಂತೆ ಸಾಕಷ್ಟು ಜನ ಸಹಕಾರ ನೀಡಿದ್ದಾರೆ. ಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ಆ ನಿಟ್ಟಿನಲ್ಲಿ ನಾನು ಗೆದ್ದಿದ್ದೇನೆ ಅಂದುಕೊಳ್ಳಬಹುದು. ಇನ್ನು ಚಿತ್ರ ಉತ್ತಮವಾಗಿ ಮೂಡಿಬರಲು ಎಲ್ಲವನ್ನು ಒದಗಿಸುತ್ತಿರುವ ನಿರ್ಮಾಪಕ ದೇವೇಂದ್ರ ಅವರಿಗೆ ಧನ್ಯವಾದ. ನಮ್ಮ ಚಿತ್ರಕ್ಕೆ ಸಂಯುಕ್ತ ಹೆಗಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೆ ಆಯಿತು. ಆನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.
ಕ್ರೀಮ್ ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ. ದೇಶದಲ್ಲಿ ಪ್ರತಿ ತಿಂಗಳು 400ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಜೊತೆಗೆ ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ, ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ. ಸಂಯುಕ್ತ ಹೆಗಡೆ ಅವರದು ಇದರಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ ಎಂದರು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ
ಈ ಸಿನಿಮಾಗಾಗಿ ನಾನು 2೦೦ ಪರ್ಸೆಂಟ್ ಎಫರ್ಟ್ ಹಾಕಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟಾಯಿತು. ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಷ್ಟೆಲ್ಲ ಶ್ರಮಪಟ್ಟರು ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿಯಿದೆ ಎಂದರು ನಾಯಕಿ ಸಂಯುಕ್ತ ಹೆಗಡೆ. ಚಿತ್ರ ಚೆನ್ನಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡದ ಸದಸ್ಯರಿಗೆ ನಿರ್ಮಾಪಕ ದೇವೇಂದ್ರ ಧನ್ಯವಾದ ತಿಳಿಸಿದರು. ನಟ ರೋಷನ್ ಸೇರಿದಂತೆ ಚಿತ್ರತಂಡ ಹಲವು ಸದಸ್ಯರು ಹಾಜರಿದ್ದರು.