ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಪ್ರಸಿದ್ಧ ಕೆರೆಯಾದ ಮದಗದ ಕೆರೆಯು ಸಂಪೂರ್ಣ ತುಂಬಿದ್ದು, ಕೆರೆ ಕೋಡಿ ಬೀಳಲು ಕೆಲವೇ ಅಡಿಗಳು ಬಾಕಿ ಇದೆ.
ಜಿಲ್ಲೆಯ ಗಿರಿ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಸುಮಾರು 2,036 ಎಕರೆ ವಿಸ್ತಿರ್ಣದ ಕಡೂರಿನ ಪ್ರಸಿದ್ಧ ಮದಗದ ಕೆರೆ ಸಂಪೂರ್ಣ ತುಂಬಿಹೋಗಿದೆ. ಈ ಹಿನ್ನೆಲೆಯಲ್ಲಿ ಕೆರೆ ಕೋಡಿ ಬೀಳಲು ಕೆಲವೇ ಅಡಿಗಳು ಬಾಕಿ ಇವೆ.
ಮದಗದ ಕೆರೆಯು ಎಂತಹುದೇ ಬರಗಾಲ ಬಂದರೂ, ಬತ್ತದೆ ಇರುವುದು ಇದರ ಇತಿಹಾಸವಾಗಿದೆ. ಕಳೆದೆರಡು ವರ್ಷಗಳ ಹಿಂದಿನ ಭೀಕರ ಬರಗಾಲದಲ್ಲೂ ಈ ಕೆರೆ ಕೋಡಿ ಬಿದ್ದಿತ್ತು. ಮದಗದ ಕೆರೆಗೆ ಬರೋದೆ ಮಾಯದಂತ ಮಳೆ ಎಂಬ ಜಾನಪದ ಗೀತೆ ಕೂಡ ಇದೆ.
ಕಳೆದ ವರ್ಷ ನೀರಿನ ಪ್ರಮಾಣ ಕಡಿಮೆಯಾಗಿದ್ದ ಈ ಕೆರೆಯಲ್ಲಿ, ಈ ವರ್ಷ ನೀರು ತುಂಬಿರುವುದರಿಂದ ಕಡೂರು ಹಾಗೂ ಬೀರೂರಿನ ರೈತರಿಗೆ ಕುಡಿಯಲು ಹಾಗೂ ಬೆಳೆಗೆ ನೀರಿನ ಸೌಲಭ್ಯ ಸಿಕ್ಕಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.