ಮಿಲಾನ್: ನಾಲ್ಕು ಬಾರಿಯ ವಿಶ್ವಕಪ್ ಚಾಂಪಿಯನ್ ಇಟಲಿ, 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾಗಿದೆ.
ಸ್ಯಾನ್ ಸಿರೋ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ 70 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಎರಡನೇ ಹಂತದ ಪ್ಲೇ ಆಫ್ ಪಂದ್ಯದಲ್ಲಿ ಇಟಲಿ, ಸ್ವೀಡನ್ ವಿರುದ್ಧ ಗೋಲು ರಹಿತ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತು.
Advertisement
ಮೂರು ದಿನಗಳ ಹಿಂದೆ ಸ್ಟಾಕ್‍ಹಾಲ್ಮ್ ನಲ್ಲಿ ನಡೆದಿದ್ದ ಮೊದಲ ಲೆಗ್‍ನ ಹಣಾಹಣಿಯನ್ನು ಸ್ವೀಡನ್ 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಹೀಗಾಗಿ 1-0 ಗೋಲಿನ ಸರಾಸರಿಯೊಂದಿಗೆ ಸ್ವೀಡನ್ ವಿಶ್ವಕಪ್‍ಗೆ ಅರ್ಹತೆ ಪಡೆದರೆ, 1958ರ ಬಳಿಕ ಇದೇ ಮೊದಲ ಬಾರಿಗೆ ಇಟಲಿ, ವಿಶ್ವಕಪ್‍ನ ಅರ್ಹತಾ ಸುತ್ತಿನಲ್ಲೇ ತನ್ನ ಅಭಿಯಾನ ಕೊನೆಗೊಳಿಸಿದೆ.
Advertisement
ಇಟಲಿಯ ಸ್ಟಾರ್ ಆಟಗಾರರಾದ ಚೆಲಿನಿ, ಆ್ಯಂಡ್ರಿಯಾ ಬರ್ಝಗಿ ಹಾಗೂ ಜೇಕಬ್ ಜಾನ್ಸನ್ ಪಂದ್ಯದ ಮೊದಲಾರ್ದದಲ್ಲಿಯೇ ಹಳದಿ ಕಾರ್ಡ್ ಪಡೆದಿದ್ದರಿಂದ ಇಟಲಿ ತನ್ನ ಆಕ್ರಮಣಕಾರಿ ಆಟದ ಶೈಲಿಯಿಂದ ಹಿಂದೆ ಸರಿಯಿತು. ಇದರಿಂದಾಗಿ ಸ್ವೀಡನ್‍ನ ರಕ್ಷಣಾ ವಿಭಾಗವನ್ನು ದಾಟಲು ಇಟಲಿಗೆ ಸಾಧ್ಯವಾಗಲಿಲ್ಲ.
Advertisement
2006ರ ಬಳಿಕ ಸ್ವೀಡನ್ ವಿಶ್ವಕಪ್‍ಗೆ ಅರ್ಹತೆ ಪಡೆಯುತ್ತಿದೆ. ವಿಶೇಷವೆಂದರೆ 2006ರಲ್ಲಿ ಇಟಲಿ ವಿಶ್ವಕಪ್ ಚಾಂಪಿಯನ್ ಆಗಿತ್ತು. ವಿಶ್ವಕಪ್‍ನಿಂದ ಇಟಲಿ ಹೊರನಡೆದಿರುವುದು ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟುಮಾಡಿದೆ.
Advertisement
ಇದಕ್ಕೂ ಮೊದಲು ಬಲಿಷ್ಠ ತಂಡಗಳಾದ ನೆದಲ್ರ್ಯಾಂಡ್, ದಕ್ಷಿಣ ಅಮೆರಿಕ ಚಾಂಪಿಯನ್ ಚಿಲಿ ಹಾಗೂ ಅಮೆರಿಕ ತಂಡಗಳು 2018ರ ವಿಶ್ವಕಪ್ ಅರ್ಹತಾ ಸುತ್ತಿನಲ್ಲೆ ಹೊರನಡೆದಿದ್ದವು.
ಕಳೆದ 7 ಟೂರ್ನಿಗಳಲ್ಲಿ ಈ ನಾಲ್ಕು ತಂಡಗಳು ಅಂತಿಮ 8ರ ಘಟ್ಟದ ಹೋರಾಟದಲ್ಲಿ ಭಾಗಿಯಾಗಿದ್ದವು. ಈ ಸೋಲಿನೊಂದಿಗೆ ಇಟಲಿ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಹಾಗೂ ವಿಶ್ವ ಫುಟ್ಬಾಲ್‍ನಲ್ಲಿ ಗೋಡೆಯೆಂದೇ ಖ್ಯಾತಿವೆತ್ತ ಗಿಯಾನ್ಲುಗಿ ಬಫನ್ ತನ್ನ ವರ್ಣರಂಜಿತ ಅಂತರಾಷ್ಟ್ರೀಯ ಫುಟ್‍ಬಾಲ್ ವೃತ್ತಿ ಜೀವನಕ್ಕೆ ಕಣ್ಣೀರ ವಿದಾಯ ಹೇಳಿದ್ದಾರೆ.
ಸ್ವೀಡನ್ ವಿರುದ್ಧದ ಪಂದ್ಯದ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಬಫನ್, ವಿಶ್ವಕಪ್‍ಗೆ ಅರ್ಹತೆ ಪಡೆಯದೆ, ಸೋಲಿನೊಂದಿಗೆ ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿರುವುದು ನನಗೆ ನಾಚಿಕೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇಟಲಿ ಪರ ಸುದೀರ್ಘ 20 ವರ್ಷಗಳಲ್ಲಿ 175 ಪಂದ್ಯಗಳನ್ನು ಆಡಿರುವ ಬಫನ್, 2006ರಲ್ಲಿ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.