ಬೆಳಗಾವಿ: ಜಿಲ್ಲೆಯಲ್ಲಿ ಸೆ.16ರಂದು ನಡೆಯಬೇಕಿದ್ದ ಈದ್ ಮಿಲಾದ್ (Eid Milad) ಮೆರವಣಿಗೆಯನ್ನು ಗಣೇಶೋತ್ಸವ ಹಿನ್ನೆಲೆಯಲ್ಲಿ ಸೆ.22ಕ್ಕೆ ಮುಂದೂಡುವ ಮೂಲಕ ಮುಸ್ಲೀಂ ಮುಖಂಡರು, ಧರ್ಮಗುರುಗಳು ಮತ್ತೊಮ್ಮೆ ಸಾಮರಸ್ಯದ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೇ ಮುಸ್ಲಿಂ ಹಬ್ಬದ ಮೆರವಣಿಗೆಗಳಲ್ಲಿ ಡಾಲ್ಬಿ, ಡಿಜೆ ಬಳಸದಂತೆ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ.
ಕ್ಯಾಲೆಂಡರ್ ಪ್ರಕಾರ ಈದ್ ಮಿಲಾದ್ ಮೆರವಣಿಗೆ ಸೆ.16ಕ್ಕೆ, ಗಣೇಶನ ವಿಸರ್ಜನಾ ಮೆರವಣಿಗೆ ಸೆ.17ಕ್ಕೆ ನಡೆಯಬೇಕಿದೆ. ಆದರೆ, ಬೆಳಗಾವಿಯಲ್ಲಿ (Belagavi) ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಹಳ ಅದ್ದೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಜನ ಸೇರುತ್ತಾರೆ. ಈ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಶುಕ್ರವಾರ ಸಭೆ ಸೇರಿದ್ದ ಮುಸ್ಲಿಂ ಸಮಾಜದ ಹಿರಿಯರು, ವಿವಿಧ ಕಮಿಟಿಗಳ ಪದಾಧಿಕಾರಿಗಳು ಹಾಗೂ ಧರ್ಮಗುರುಗಳು ಈದ್ ಮಿಲಾದ್ ಮೆರವಣಿಗೆ ಮುಂದೂಡುವ ಒಮ್ಮತದ ನಿರ್ಣಯ ಕೈಗೊಂಡರು.ಇದನ್ನೂ ಓದಿ: ಕಲಬುರಗಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಸಕ್ರಿಯ – ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳೇ ಟಾರ್ಗೆಟ್
ಸಭೆಯಲ್ಲಿ ಶಾಸಕ ಆಸೀಫ್ ಸೇಠ್, ಇಸ್ಲಾಂ ಧರ್ಮಗುರುಗಳಾದ ಮುಫ್ತಿ ಮಂಜೂರ್ ಅಹ್ಮದ್ ರಿಜ್ವಿ, ಹಫೀಜ್ ನಜೀರುಲ್ಲಾ ಖಾದ್ರಿ, ಸರ್ದಾರ್ ಅಹ್ಮದ್, ಮುಷ್ಕಾಕ್ ನಯೀಮ್ ಅಹ್ಮದ್ ಸೇರಿ ಮತ್ತಿತರರು ಇದ್ದರು. ಈ ನಿರ್ಧಾರವನ್ನು ಸಾರ್ವಜನಿಕ ಗಣೇಶ ಮಂಡಳಿಗಳು ಸ್ವಾಗತಿಸಿವೆ.
ಹಿಂದಿನ ವರ್ಷವೂ ಈದ್ ಮಿಲಾದ್ ಮತ್ತು ಗಣೇಶೋತ್ಸವ (Ganesh Festival) ಮೆರವಣಿಗೆ ಎರಡೂ ಕೂಡಿಯೇ ಬಂದಿದ್ದವು. ಆಗಲೂ ಮುಸ್ಲಿಂ ಮುಖಂಡರು ಈದ್ ಮಿಲಾದ್ ಮೆರವಣಿಗೆ ಮುಂದೂಡಿ ಇಡೀ ರಾಜ್ಯಕ್ಕೆ ಕೋಮು ಸಾಮರಸ್ಯದ ಸಂದೇಶ ಸಾರಿದ್ದರು. ಈ ವರ್ಷವೂ ಕೂಡ ಅದೇ ನಿರ್ಧಾರ ಕೈಗೊಳ್ಳುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನು ಸೆ.16ರಂದು ಪದ್ಧತಿ ಪ್ರಕಾರ ಎಲ್ಲ ಮಸೀದಿ ಹಾಗೂ ಮನೆಗಳಲ್ಲಿ ಈದ್ ಆಚರಣೆಗಳು ನಡೆಯಲಿವೆ. ಮೆರವಣಿಗೆ ಮಾತ್ರ 22ಕ್ಕೆ ನಡೆಯಲಿದೆ.ಇದನ್ನೂ ಓದಿ: Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು