ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ಆಗಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇತಂಹ ಯಾವುದೇ ಮುನ್ನೆಚರಿಕೆ ಸಂದೇಶವನ್ನು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ಆಗಲಿದೆ ಎಂಬ ವದಂತಿ ಇರುವ ಸಂದೇಶ ಹರಿದಾಡುತ್ತಿದ್ದು, ಇಂತಹ ಸಂದೇಶಗಳನ್ನು ನಂಬಿ ಜನರು ಕಿವಿಗೊಟ್ಟು ಆತಂಕಗೊಳ್ಳುವ ಅಗತ್ಯವಿಲ್ಲ. ಭೂ ಕಂಪನದ ಕುರಿತು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ಯಿಂದ ಯಾವುದೇ ಮುನ್ನೆಚ್ಚರಿಕೆ ಸಂದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.
ಕೊಡಗಿನಲ್ಲಿ ಮಳೆ ಮುಂದುವರಿದಿರುವ ಪರಿಣಾಮ ಹಸಿಯಾಗಿರುವ ಗುಡ್ಡ ಕುಸಿಯುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಜಿಲ್ಲೆಯ ಮುಕ್ಕೋಡ್ಲು ಗ್ರಾಮದಲ್ಲಿ ಮಣ್ಣು ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಜೊತೆಗೆ ಮತ್ತೊಬ್ಬರು ಮಣ್ಣಿನಲ್ಲಿ ಸಿಲುಕಿದ್ದಾರೆ. ಮಳೆ ಮತ್ತೆ ತನ್ನ ಮುಂದುವರಿದಿರುವ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ತಡೆಯಾಗಿದೆ. ಈಗಾಗಲೇ ಒಟ್ಟು 40 ಜನರನ್ನು ರಕ್ಷಣೆ ಮಾಡಲಾಗಿದ್ದು, ಉಳಿದ 120 ಮಂದಿ ರಕ್ಷಣೆಗೆ ಮಳೆ ಅಡ್ಡಿಯಾಗಿದೆ. ಇದರಲ್ಲಿ 80 ಜನರು ಅಪಾಯದ ಸ್ಥಿತಿಯಲ್ಲಿದ್ದಾರೆ. ಮುಕ್ಕೋಡ್ಲು ಭಾಗದಲ್ಲಿ ನಿರಂತರವಾಗಿ ಗುಡ್ಡ ಕುಸಿತವಾಗುತ್ತಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ಇದು ಅಡ್ಡಿಯಾಗುತ್ತಿದೆ. ಅಪಾಯದ ಪರಿಸ್ಥಿತಿಯಲ್ಲೂ ಯೋಧರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv