ದರ್ಶನ್ ನಟನೆಯ ಡೆವಿಲ್ ಸಿನಿಮಾದ (The Devil) `ಇದ್ರೆ ನೆಮ್ದಿಯಾಗ್ ಇರ್ಬೇಕ್ʼ (Idre Nemdiyaag Irbek) ಹಾಡು ಇಂದು ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳು ಹಲವಾರು ದಿನಗಳಿಂದ ಕುತೂಹಲದಿಂದ ಕಾಯ್ತಿದ್ದ ಈ ಹಾಡು ಕೊನೆಗೂ ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ದೀಪಕ್ ಬ್ಲೂ ಹಾಡಿಗೆ ಧ್ವನಿಯಾಗಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗಲೇ ಡೆವಿಲ್ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ.
ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್ 15ರಂದು ಈ ಹಾಡು ಬಿಡುಗಡೆ ಆಗಬೇಕಿತ್ತು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದ ಕಾರಣದಿಂದಾಗಿ, ಆಗಸ್ಟ್ 14ರಂದು ದರ್ಶನ್ ಮತ್ತೆ ಜೈಲುಪಾಲಾದರು. ಇಂದು ಈ ಹಾಡನ್ನು ರಿಲೀಸ್ ಮಾಡಲಾಗಿದೆ. ಚಿತ್ರದ ನಿರ್ದೇಶಕ ಪ್ರಕಾಶ್ ವೀರ್, ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ (Darshan) ಜೊತೆ ಚರ್ಚಿಸಿ ಇಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಡೆವಿಲ್ ಹಾಡು ನೋಡಿ ದರ್ಶನ್ ಅಭಿಮಾನಿಗಳು ಒಂದು ಕಡೆ ಸಂಭ್ರಮ ಪಡುತ್ತಿದ್ದಾರೆ. ಮತ್ತೊಂದು ಕಡೆ ದಚ್ಚು ಜೈಲಿನಲ್ಲಿರುವ ಕಾರಣದಿಂದ ಫ್ಯಾನ್ಸ್ ಸಂಕಟ ಪಟುವಂತಾಗಿದೆ.
ದರ್ಶನ್ ಜೈಲಿನಲ್ಲಿದ್ದಾಗಲೇ ಹಾಡನ್ನ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾ ತೆರೆಗೆ ಬರಲು ಕೂಡಾ ಸೂಚನೆ ಸಿಕ್ಕಿದೆ. ಸಿನಿಮಾದ ಎಲ್ಲಾ ಕಾರ್ಯಗಳು ಮುಗಿದಿದ್ದು, ಸಿನಿಮಾ ತೆರೆಗೆ ಬರೋದು ಮಾತ್ರ ಬಾಕಿ ಇದೆ. ಹೀಗಾಗಿ ದರ್ಶನ್ ಜೊತೆ ಚರ್ಚಿಸಿ ಸಿನಿಮಾವನ್ನ ರಿಲೀಸ್ ಮಾಡಲು ಚಿತ್ರತಂಡ ಕೂಡಾ ನಿರ್ಧರಿಸಿದೆಯಂತೆ.
ಡೆವಿಲ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲೇ ದರ್ಶನ್ ಮೈಸೂರಿನಲ್ಲಿ ಬಂಧನವಾಗಿದ್ದರು. ಆನಂತರ ನೂರಾರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಜಾಮೀನು ಸಿಕ್ಕು ಆಚೆ ಬಂದ ಮೇಲೆ ಡೆವಿಲ್ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದರು. ಈಗ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈಗ ಮತ್ತೆ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್ ಇಲ್ಲದೇ ಸಿನಿಮಾ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ.