ಜೈಪುರ: 2 ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ (Rajsthan) ಜೋಧ್‌ಪುರದಲ್ಲಿ (Jodhpur) ನಡೆದಿದೆ. ಮೃತ ಮಹಿಳೆಯನ್ನು ಅನಿತಾ ಚೌಧರಿ (50) ಎಂದು ಗುರುತಿಸಲಾಗಿದೆ.
ಅ.27 ಭಾನುವಾರದಂದು ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಎರಡು ದಿನಗಳ ಬಳಿಕ ಅ.30 ಬುಧವಾರದಂದು 6 ತುಂಡುಗಳಾಗಿ ಪತ್ತೆಯಾಗಿದೆ.ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ – 2 ಕೋಟಿಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಮುಂಬೈನಲ್ಲಿ ಅರೆಸ್ಟ್
ಅನಿತಾ ಜೋಧ್‌ಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಪಾರ್ಲರ್ ಮುಚ್ಚಿ, ಮನೆಗೆ ತೆರಳಿದ್ದರು. ಆದರೆ ಆಕೆ ಮನೆಗೆ ತಲುಪಿರಲಿಲ್ಲ. ಮಾರನೇ ದಿನ ಆಕೆಯ ಪತಿ ಮನಮೋಹನ್ ಚೌಧರಿ (56) ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಆಕೆಯ ಕುಟುಂಬದ ಹಳೆಯ ಸ್ನೇಹಿತನೊಬ್ಬ ಕೊಂದಿರುವ ಶಂಕೆ ವ್ಯಕ್ತವಾಗಿತ್ತು.
ತನಿಖೆ ನಡೆಸಿದಾಗ, ಸಂತ್ರಸ್ತೆಯ ಮೊಬೈಲ್ ಲೊಕೆಷನ್ ಮತ್ತು ಕಾಲ್ ರೆಕಾರ್ಡ್ಸ್ ಪರಿಶೀಲನೆ ನಡೆಸಿದಾಗ ಗುಲ್ ಮೊಹಮ್ಮದ್ ಎಂಬ ವ್ಯಕ್ತಿಯ ಮನೆಯ ಲೊಕೇಷನ್ ಸಿಕ್ಕಿದೆ. ಮೊಹಮ್ಮದ್ ಸಂತ್ರಸ್ತೆಯ ಸ್ನೇಹಿತನಾಗಿದ್ದ. ಆಕೆ ಆತನನ್ನು ಸಹೋದರ ಎಂದು ಪರಿಗಣಿಸಿದ್ದಳು ಎಂದು ತಿಳಿದುಬಂದಿದೆ.
ಬಳಿಕ ಮೊಹಮ್ಮದ್ ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ, ಮೃತದೇಹವನ್ನು ಮನೆಯ ಹಿಂದೆ ಹೂಳಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಸ್ಥಳದ ಪರಿಶೀಲನೆ ನಡೆಸಿದಾಗ ಆಕೆಯ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿರುವುದು ಪತ್ತೆಯಾಗಿದೆ. ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸದ್ಯ ಮೊಹಮ್ಮದ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆತನ ಪತ್ನಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತಸಾಗರ – ತುಂಬಿ ತುಳುಕುತ್ತಿರುವ ಸರತಿ ಸಾಲು