ಬೆಂಗಳೂರು: ಕಾಂಗ್ರೆಸ್ ಪಕ್ಷ (Congress Party) ವು ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ ಎಂದು ಮಾಜಿ ಸಚಿವ ಆರ್.ಅಶೋಕ್ (R Ashok) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಪ್ಪುವಿನ ಮತಾಂತರದ ಸಿದ್ಧಾಂತಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಹೊರಟಿದೆ. ಕಾಂಗ್ರೆಸ್ ಪಕ್ಷವು ಪಿಎಫ್‍ಐ, ಕೆಎಫ್‍ಡಿ ಪರವಾಗಿದೆಯೇ ಎಂದು ಪ್ರಶ್ನಿಸಿದರು. ಈ ರೀತಿ ಜನಾದೇಶದ ದುರ್ಬಳಕೆಗೆ ಬಿಜೆಪಿ (BJP) ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
Advertisement
ರಾಜ್ಯದಲ್ಲಿ ನೀವು ಯಾರ ಪರ ಇದ್ದೀರಿ? ಎಂದು ಪ್ರಶ್ನಿಸಿದ ಅವರು, 30ರಿಂದ 40 ಲಕ್ಷಕ್ಕೂ ಹಿಂದೂಗಳು ದುಡ್ಡಿನ ಆಮಿಷ, ಲವ್ ಜಿಹಾದ್, ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೆ ಮತಾಂತರ ಆದ ಮಾಹಿತಿ ಇದೆ ಎಂದು ವಿವರಿಸಿದರು. ಕಾಂಗ್ರೆಸ್ ಯಾರಿಗಾಗಿ ಈ ಕಾಯ್ದೆ ತರುತ್ತಿದೆ? ಎಂದ ಅವರು, ಬಲವಂತದ ಮತಾಂತರ ಸಲ್ಲದು ಎಂಬ ಭಾವನೆ ಹಾಗೂ ನಿಲುವನ್ನು ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರು ಹೊಂದಿದ್ದರು ಎಂದು ವಿವರಿಸಿದರು.
Advertisement
Advertisement
ಮತಾಂತರ (Conversion) ಆಗುವುದಾದರೆ ಕಾನೂನು ಪ್ರಕಾರ ಆಗಬೇಕೆಂಬ ನಮ್ಮ ಕಾಯ್ದೆಯಲ್ಲಿ ತಪ್ಪೇನಿದೆ? ಟಿಪ್ಪು ಕೊಡಗಿನಲ್ಲಿ 50ರಿಂದ 60 ಸಾವಿರ ಜನರನ್ನು ಮತಾಂತರ ಮಾಡಿದ್ದ. ಆತನನ್ನು ವೈಭವೀಕರಿಸಿ ಅವನ ಜಯಂತಿ ಮಾಡಿದರು. ಗಲಭೆಗೆ ಕಾರಣರಾದರು ಎಂದು ಟೀಕಿಸಿದ ಅವರು, ಈ ಕಾಯ್ದೆ ವಾಪಸ್ ಪಡೆಯಬಾರದು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದರು.
Advertisement
ಮತ ಬ್ಯಾಂಕಿಗಾಗಿ, ಒಂದು ಸಮುದಾಯದವರನ್ನು ಓಲೈಸಲು ಈ ಕಾಯ್ದೆ ಹಿಂದಕ್ಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ (Congress) ವೋಟಿಗೋಸ್ಕರ ಯಾವ ಹಂತಕ್ಕಾದರೂ ಹೋಗುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಗೂಂಡಾಗಿರಿ ಹೆಚ್ಚಳ: ಆರ್.ಅಶೋಕ್
ಹಿಂದೆ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಎಂಸಿ ಆರಂಭವಾಗಿತ್ತು. ಅದೊಂದು ರೀತಿಯ ಗುತ್ತಿಗೆ ಕೊಡುವ ಪ್ರಯತ್ನ. ದಲ್ಲಾಳಿಗಳು ಗೇಟಿನಲ್ಲೇ ನಿಂತು ಖರೀದಿಸಿ ಲಾಭ ಮಾಡುವ ವ್ಯವಸ್ಥೆ ಅದು. ನಾವು ಮಾಡಿದ ತಿದ್ದುಪಡಿಯಡಿ ದೇಶದ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಇದೆ. ರೈತರಿಗೆ ಸಾವಿರಾರು ಕೋಟಿ ಆದಾಯ ಸಿಗಬೇಕೇ? ಅಥವಾ ಎಪಿಎಂಸಿಗೆ ಲಾಭ ಆಗಬೇಕೇ? ದಲ್ಲಾಳಿಗಳ ಲಾಭ ಹೆಚ್ಚಬೇಕೇ? ಎಂದು ಕೇಳಿದರು.
ದಲ್ಲಾಳಿಗಳಿಗೆ ಉಪಯೋಗ ಮಾಡುವ ಹುನ್ನಾರ ಇದರಡಿ ಇದೆ. ತೂಕದಲ್ಲೇ ವ್ಯತ್ಯಾಸ ಮಾಡುತ್ತಿದ್ದರು. ಆದರೆ ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಕಾಂಗ್ರೆಸ್, ದಲ್ಲಾಳಿಗಳ ರಾಜ್ಯ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಪಠ್ಯಪುಸ್ತಕ ಬದಲಾವಣೆ ಬಗ್ಗೆ ತರಾತುರಿ ಸಲ್ಲದು. ಏಕಾಏಕಿ ಮಕ್ಕಳಿಗೆ ತೊಂದರೆ ಕೊಡುವ ಉದ್ದೇಶ ಹೊಂದಿ ನಿಮ್ಮ ಸಿದ್ಧಾಂತ ಹೇರುವ ಪ್ರಯತ್ನ ಮಾಡಿದ್ದೀರಿ. ಇದರಿಂದ ಕೆಟ್ಟ ಸಂದೇಶ ಕೊಟ್ಟಿದ್ದೀರಿ ಎಂದು ತಿಳಿಸಿದರು.
ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುವ ಮಾತು ಕೇಳುತ್ತಿದೆ. 10 ರೂ. ಕೊಟ್ಟು 20 ರೂ. ಕಿತ್ತುಕೊಳ್ಳುವ ಗ್ಯಾರಂಟಿ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡುತ್ತಿದೆ ಎಂದ ಅವರು, ಏಯ್ ಮಹದೇವಪ್ಪ ನಿನಗೂ ಫ್ರೀ, ನನಗೂ ಫ್ರೀ, ಕಾಕಾ ಪಾಟೀಲ್ ನಿನಗೂ ಫ್ರೀ ಎಂದಿದ್ದರು. ಈಗ ಕಂಡಿಷನ್ ಅಪ್ಲೈ ಎಂದಿದ್ದೀರಾ? ಈಗ ಹೊಸ ಮನೆಗೆ ಒಂದು, ಸರಾಸರಿ ಎಂಬ ಕಂಡಿಷನ್ ಹಾಕುತ್ತೀರಿ. ಠೇವಣಿ ಶೇ 65ರಷ್ಟು ಹೆಚ್ಚಳ ಮಾಡಿದ್ದಾರೆ. ತಾತ್ಕಾಲಿಕ ಸಂಪರ್ಕಕ್ಕೆ 70% ರಷ್ಟು ಠೇವಣಿ ಸಂಗ್ರಹ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ವಿದ್ಯುತ್ ದರ ಹೆಚ್ಚಳ ಒಂದು ಕಳ್ಳಾಟ. 70 ಪೈಸೆ ಹೆಚ್ಚಿಸಿದ್ದಾರೆ. ಬೇಕಾದುದೆಲ್ಲ ಕಾಂಗ್ರೆಸ್ ಪಕ್ಷದ್ದು. ಬೇಡದ್ದೆಲ್ಲವೂ ಬಿಜೆಪಿಯದ್ದು ಎಂದು ತಿಳಿಸಿದರು. ಕೇಂದ್ರವು ಅಕ್ಕಿ ವಿಚಾರದಲ್ಲಿ ಸಮಸ್ಯೆ ತಂದೊಡ್ಡಿದೆ ಎಂದರೆ, ಕೇಳಿದೊಡನೆ ಕೊಡಲು ಕೇಂದ್ರ ಎಂದರೆ ಅತ್ತೆ ಮನೆಯೇ? ಘೋಷಿಸುವ ಮೊದಲೇ ನಿಮಗೆ ಜ್ಞಾನ, ಪ್ರಜ್ಞೆ ಇರಲಿಲ್ಲವೇ? ನಾಳೆ ಕರ್ನಾಟಕವನ್ನು ಮಾರಾಟ ಮಾಡುತ್ತೇವೆ ಎಂದರೆ ಕೇಂದ್ರ ಎಸ್ ಎನ್ನಬೇಕೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಊಟಕ್ಕೆ ಕೂತರೆ ನಂದೂ ನಂದೇ, ನಿನ್ನದೂ ನಂದೇ’ ಎಂಬಂತಾಗಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ 1 ಲಕ್ಷದ 10 ಸಾವಿರ ಕೋಟಿ ಹಣ ಬೇಕು. ರಾಜ್ಯ ಇನ್ನೊಂದು ವರ್ಷದಲ್ಲಿ ದಿವಾಳಿ ಆಗಲಿದೆ. ಕಾನೂನನ್ನು ಎಲ್ಲರೂ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅಂಗನವಾಡಿ, ಸಣ್ಣ ಕೈಗಾರಿಕೆ, ಸ್ತ್ರೀಶಕ್ತಿ ಸಂಘಗಳ ಗಲಾಟೆ ಮುಂದುವರಿಯುವಂತಾಗಿದೆ. ಇದು ಕಾಂಗ್ರೆಸ್ ಪಕ್ಷದ ಅಜಾಗರೂಕತೆಯ ಸೃಷ್ಟಿ ಎಂದು ಟೀಕಿಸಿದರು. ವಿದ್ಯುತ್ ದರದ ವಿಚಾರದಲ್ಲಿ ಮೋಸಗಾರರು ಯಾರು? ಎಂದು ಕೇಳಿದ ಅವರು, ಕಳೆದ ಬಾರಿ ಮತ್ತು ಈ ಬಾರಿಯ ಬಿಲ್ಲನ್ನು ಸೋಷಿಯಲ್ ಮೀಡಿಯಕ್ಕೆ ಹಾಕಿ ಎಂದು ಮನವಿ ಮಾಡಿದರು. ಕೊಟ್ಟಂಗೆ ತೋರಿಸಿ ಎಲ್ಲ ಕಿತ್ಕೊಳೋದು ಎಂಬ ದುಸ್ಥಿತಿ ಕಾಂಗ್ರೆಸ್‍ನವರದು ಎಂದು ಆಕ್ಷೇಪಿಸಿದರು.
ಆಟೋ, ಟ್ಯಾಕ್ಸಿಯವರೂ ಬೀದಿಗೆ ಇಳಿಯುವಂತಾಗಿದೆ. ಮಾನ ಮರ್ಯಾದೆ ಇದ್ರೆ ಯೋಚನೆ ಮಾಡಿ ಇದನ್ನು ಜಾರಿಗೊಳಿಸಬೇಕಿತ್ತು ಎಂದು ತಿಳಿಸಿದರು. ಕೇವಲ ಮತಕ್ಕಾಗಿ ಏನೇನು ಮಾಡಬಹದು ಎಂಬುದನ್ನು ಕಾಂಗ್ರೆಸ್ ಮಾಡಿ ತೋರಿದೆ ಎಂದು ನುಡಿದರು. ಕಾಂಗ್ರೆಸ್ ಪಕ್ಷದ ತನ್ವೀರ್ ಸೇಠ್, ಶ್ಯಾಮನೂರು ಶಿವಶಂಕರಪ್ಪ ಅವರೇ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಪ್ರಶ್ನೆ ಮಾಡುವಂತಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ಕ್ಯಾಬಿನೆಟ್ ನಿರ್ಧಾರ ಮಾಡಿದ್ದಾರೆ. ಇವುಗಳ ವಿರುದ್ಧ ವಿಧಾನಸಭೆ ಹೊರಗೆ ಮತ್ತು ಒಳಗಡೆ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್, ಟಿಪ್ಪು ಆಡಳಿತವನ್ನು ಜಾರಿಗೊಳಿಸಲು ಹೊರಟಿದೆ. ಕಾಂಗ್ರೆಸ್ ದುರಾಡಳಿತ, ಅರಾಜಕತೆ, ಗ್ಯಾರಂಟಿ ವಿಚಾರದಲ್ಲಿ ಕಂಡಿಷನ್,ವಿವಿಧ ಕಾಯ್ದೆಗಳ ಹಿಂತೆಗೆತದ ನಿರ್ಧಾರವನ್ನು ಖಂಡಿಸಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ 19ರಂದು ಆಂದೋಲನದ ಕುರಿತು ಸಭೆ ನಡೆಸಲಿದೆ ಎಂದು ಆರ್.ಅಶೋಕ್ ಅವರು ಪ್ರಕಟಿಸಿದರು. ಬಳಿಕ ಜನಾಂದೋಲನ ರೂಪಿಸಲಿದ್ದೇವೆ ಎಂದರು.