ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಹಿಷ್ಕಾರಕ್ಕೆ ಬಿಜೆಪಿ (BJP) ನಾಯಕರು ಕರೆ ನೀಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.
ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ನಾಯಕರ ನಿಜ ಬಣ್ಣ ಬಯಲಾಗುತ್ತಿದೆ. ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ಬಂದು ಸಮೀಕ್ಷೆ ಬಹಿಷ್ಕಾರದ ಕರೆ ನೀಡುತ್ತಿದ್ದಾರೆ. ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಸಮೀಕ್ಷೆ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತ ಅಲ್ಲ. ಯಾರ ವಿರುದ್ಧವೂ ಅಲ್ಲ, ಎಲ್ಲರ ಪರವಾಗಿರುವ ಸಮೀಕ್ಷೆಯಿದು. ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ. ಬಿಜೆಪಿಯ ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ. ನಮ್ಮ ಸರ್ಕಾರ ನಡೆಸುವ ಸಮೀಕ್ಷೆಯಿಂದ ಕೇವಲ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿ-ಗತಿ ಮಾತ್ರವಲ್ಲ. ಮುಂದುವರಿದ ಜಾತಿಗಳೊಳಗಿನ ಬಡವರು ಮತ್ತು ಅವಕಾಶ ವಂಚಿತರ ಸ್ಥಿತಿಗತಿಯೂ ಗೊತ್ತಾಗಲಿದೆ. ಈ ವಾಸ್ತವಸ್ಥಿತಿ ಅರಿವಾಗುವುದು ಬಿಜೆಪಿಯವರಿಗೆ ಬೇಡವಾಗಿದೆ. ಬಿಹಾರದಲ್ಲಿ ಇವರದ್ದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಇದನ್ನೂ ಓದಿ: ಸರ್ಕಾರದಲ್ಲಿ ಬಾಕಿ ಬಿಲ್ ಪಾವತಿಗೆ ದುಪ್ಪಟ್ಟು ಕಮಿಷನ್ ಆರೋಪ – ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ
ರಾಜ್ಯ ಬಿಜೆಪಿ ನಾಯಕರ ತಲೆಬುಡವಿಲ್ಲದ ಸಲಹೆಯನ್ನು ಕಸದ ಬುಟ್ಟಿಗೆ ಎಸೆದು, ಜನಪರ ಕಾಳಜಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ನಾಡಿನ ಏಳು ಕೋಟಿ ಜನರಲ್ಲಿ ಮನವಿ ಮಾಡುತ್ತೇನೆ. #SocialJustice pic.twitter.com/60e8lIYn9X
— Siddaramaiah (@siddaramaiah) September 29, 2025
ಎಲ್ಲರೂ ಈಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕು. ಈ ಮೂಲಕ ನಾವೆಲ್ಲರೂ ಸೇರಿ ಸಮ ಸಮಾಜವನ್ನು ನಿರ್ಮಾಣ ಮಾಡೋಣ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನು ಮಾಡೋಣ. ನಾನು ವಿನಯಪೂರ್ವಕವಾಗಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.