ಚಿಕ್ಕಬಳ್ಳಾಪುರ: ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ವತಿಯಿಂದ ಜಿಲ್ಲೆಯ ಹಾಲು (Milk) ಉತ್ಪಾದಕ ರೈತರಿಗೆ (Farmers) ಪ್ರತಿ ಲೀಟರ್ ಹಾಲಿಗೆ 1 ರೂ. ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ.
ಹೊಸ ವರ್ಷದ ಅಂಗವಾಗಿ ಇಂದಿನಿಂದ ಪ್ರತಿ ಲೀಟರ್ ಹಾಲಿನ ಮೇಲೆ ರೈತರಿಗೆ ಒಂದು ರೂಪಾಯಿ ಹೆಚ್ಚಳವಾಗಿ ಸಿಗಲಿದೆ. ಇಷ್ಟು ದಿನ ತಲಾ ಒಂದು ಲೀಟರ್ ಹಾಲಿಗೆ 35.40 ರೂ. ಪೈಸೆ ಇದ್ದು ಇಂದಿನಿಂದ ಒಂದು ರೂಪಾಯಿ ಹೆಚ್ಚಳವಾಗಿ ರೈತರಿಗೆ 36.40 ರೂ. ಸಿಗಲಿದೆ. ಪ್ರತಿ ಲೀಟರ್‌ಗೆ ಸರ್ಕಾರದಿಂದ ಐದು ರೂಪಾಯಿ ಪ್ರೋತ್ಸಾಹ ದಿನವೂ ಸಿಗಲಿದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಇಂದಿನಿಂದ 41.40 ರೂ. ಸಿಗಲಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಹಾಗೂ ಚಿಮುಲ್ ಆಡಳಿತಾಧಿಕಾರಿ ಅಶ್ವಿನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮುಂದಿನ ಮೂರು ತಿಂಗಳ ಅವಧಿಗೆ ಹಾಲು ಉತ್ಪಾದಕ ಹೈನುಗಾರರಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಲು ಪ್ರತಿ ಲೀಟರ್ ಹಾಲಿನ ಮೇಲೆ 1 ರೂ. ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷವೂ ಸಹ 1 ರೂ. ಹೆಚ್ಚಳ ಮಾಡಲಾಗಿತ್ತು. 1 ರೂ. ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ ಮೂರು ತಿಂಗಳ ವರೆಗೆ 4.5 ಕೋಟಿ ರೂ. ಹೊರೆಯಾಗಲಿದೆ. ಆದರೂ ಮುಂದಿನ ಮೂರು ತಿಂಗಳು ರೈತರಿಗೆ ಪ್ರೋತ್ಸಾಹ ನೀಡಲು ಹೆಚ್ಚಳ ಮಾಡಲಾಗಿದೆ ಎಂದರು.
ರೈತರಿಂದ 5 ರೂ. ಹೆಚ್ಚಳಕ್ಕೆ ಬೇಡಿಕೆ
ಕೋಲಾರ ಹಾಲು ಒಕ್ಕೂಟದಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕಾರ್ಯಾರಂಭ ಮಾಡಿ ಕೇವಲ ಒಂದು ವರ್ಷ ಮೂರು ತಿಂಗಳ ಅವಧಿಯಾಗಿದೆ. ಆದರೂ ಉತ್ತಮ ಸುಸ್ಥಿತಿ ಹಾಗೂ ಲಾಭದಾಯಕವಾಗಿದ್ದು ಹೀಗಾಗಿ ರೈತರಿಗೆ 1 ರೂ. ಹೆಚ್ಚಳ ಮಾಡಿ ಉಡುಗೊರೆ ನೀಡಿದೆ. ಆದರೆ ರೈತರು ಜಾನುವಾರುಗಳ ಮೇವಿನ ದರಗಳು ಹೆಚ್ಚಾಗಿದ್ದು 5 ರೂ. ನೀಡಿದ್ದರೆ ತುಂಬಾ ಅನುಕೂಲ ಆಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಒಕ್ಕೂಟದ ಈ ನಿರ್ಣಯ ರೈತರಿಗೆ ಲಾಭದಾಯಕ ಹಾಗೂ ಸಂತಸ ತಂದಿದೆ.


