ಬೆಳಗಾವಿ/ಚಿಕ್ಕೋಡಿ: ಈ ಊರಲ್ಲಿ ಸಮಾಧಿ ಇಲ್ಲದಿರೋ ಮನೆ ಹುಡುಕಿಕೊಡಿ ಅನ್ನೋ ಹಾಗಾಗಿದೆ. ಈ ಗ್ರಾಮದ ಪ್ರತಿಯೊಂದು ಮನೆಯ ಮುಂದೆ ಒಂದೆರಡು ಸಮಾಧಿಗಳು ಕಾಮನ್. ವ್ಯಕ್ತಿ ಬದುಕಿದ್ದಾಗ ಚಿಂತೆ ಮಾಡೋದಕ್ಕಿಂತಲೂ ಸತ್ತ ನಂತರವೇ ಇಲ್ಲಿನ ಜನಕ್ಕೆ ಹೆಚ್ಚಿನ ಚಿಂತೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸಿದ್ದಾಪೂರ ಗ್ರಾಮಸ್ಥರು ಕುಟುಂಬ ಸದಸ್ಯರ ಅಂತ್ಯ ಸಂಸ್ಕಾರವನ್ನ ಮನೆಯ ಮುಂದೆಯೇ ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಹೆಚ್ಚು ದಲಿತ ಕುಟುಂಬಗಳು ವಾಸವಾಗಿದೆ. ಕಳೆದ ಹಲವು ದಶಕಗಳಿಂದ ಇಲ್ಲಿ ನೂರಾರು ದಲಿತ ಕುಟುಂಬಗಳಲ್ಲಿ ಯಾರಾದ್ರೂ ಸಾವನ್ನಪ್ಪಿದ್ರೆ ಅಂತ್ಯಸಂಸ್ಕಾರ ಮಾಡೋದಕ್ಕೆ ಮಾತ್ರ ಸ್ಮಶಾನ ಭೂಮಿಯೇ ಇಲ್ಲ. ತಮ್ಮ ತಮ್ಮ ಮನೆಯ ಎದುರಲ್ಲೇ ಅಂತ್ಯ ಸಂಸ್ಕಾರ ಮಾಡೋದು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಪ್ರತಿಯೊಬ್ಬರ ಮನೆಯ ಮುಂದೇನೂ ತುಳಸಿಕಟ್ಟೆ, ಜಗಲಿ ಕಟ್ಟೆಯಂತೆ ಇಲ್ಲಿ ಸಮಾಧಿಗಳೇ ಗೋಚರಿಸುತ್ತಿವೆ. ಕೆಲವರ ಮನೆಯ ಎದುರಲ್ಲಿ ಎರಡ್ಮೂರು ಸಮಾಧಿಗಳಿದ್ದು, ಮತ್ತೆ ಕೆಲವರು ಸಮಾಧಿಯ ಮೇಲೆಯೇ ಮತ್ತೊಬ್ಬರ ಸಮಾಧಿ ನಿರ್ಮಾಣ ಮಾಡಿದ್ದಾರೆ.
Advertisement
Advertisement
ಕೃಷ್ಣಾ ನದಿಯಿಂದ ಅಣತಿ ದೂರದಲ್ಲಿ ಇರೋ ಸಿದ್ದಾಪೂರ ಗ್ರಾಮದಲ್ಲಿ ಜನರು ಜೀವಂತವಿದ್ದಾಗ ಪಡೋ ವ್ಯಥೆಗಿಂತ ಯಾರದ್ರೂ ಸಾವನ್ನಪ್ಪಿದರೆ ಇವರ ಚಿಂತೆ ಇಮ್ಮಡಿಯಾಗುತ್ತದೆ. ಅಂತ್ಯಕ್ರಿಯೆ ಮಾಡೋದು ಹೇಗೆ? ಶವ ಎಲ್ಲಿ ಹೂಳೋದು, ಅಗ್ನಿಸ್ಪರ್ಶ ಮಾಡೋದು ಹೇಗೆ ಎಂಬ ಚಿಂತೆಯಲ್ಲಿಯೇ ತೊಳಲಾಡುವಂತಾಗಿದೆ. ಎಸ್ ಸಿ ಮೀಸಲು ಕ್ಷೇತ್ರವಾಗಿರೋ ಕುಡಚಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರೋ ಇಲ್ಲಿನ ದಲಿತ ಕುಟುಂಬಗಳಿಗೆ ಹಲವು ವರ್ಷಗಳು ಕಳೆದರೂ ಇಲ್ಲಿನ ಜನರಿಗೆ ನ್ಯಾಯ ಸಿಕ್ಕಿಲ್ಲ. ಸಾಕಷ್ಟು ಬಾರಿ ಇಲ್ಲಿನ ಶಾಸಕ ಪಿ. ರಾಜೀವ್ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ರಾಯಭಾಗ ತಹಶೀಲ್ದಾರ್ ದುಂಡಪ್ಪ, ಸದ್ಯ ಶವ ಸಂಸ್ಕಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಮುಂದೆ ಶಾಶ್ವತ ಪರಿಹಾರ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಮನೆ ಮುಂದೆ ಸುಂದರ ಕೈ ತೋಟ, ತುಳಸಿ ಕಟ್ಟೆ ಇರಬೇಕಾದ ಸ್ಥಳದಲ್ಲಿ ಸತ್ತವರ ಸಮಾಧಿಯನ್ನು ಮಾಡಿಕೊಳ್ಳುವಂತಹ ದುರ್ದೈವ ಈ ಗ್ರಾಮಸ್ಥರದ್ದಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಆಶ್ವಾಸನೆ ನೀಡದೇ ಎಚ್ಚೆತ್ತು ಈ ಕುಟುಂಬಗಳಿಗೆ ಸ್ಮಶಾನ ಜಾಗವನ್ನು ನೀಡಬೇಕಾಗಿದೆ.