ಮಡಿಕೇರಿ: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬುದು ಹಳೇ ಗಾದೆ. ಆದರೆ ಶವ ಸಂಸ್ಕಾರ ಮಾಡದಿದ್ರೂ ಪರವಾಗಿಲ್ಲ, ಕ್ರಿಕೆಟ್ ಸ್ಟೇಡಿಯಂ ಬೇಕು ಎಂಬುದು ಹೊಸ ಗಾದೆ ಎಂದು ಅನಿಸುತ್ತಿದೆ. ಹೌದು. ಕೊಡಗಿನಲ್ಲಿ ಸ್ಮಶಾನದ ಜಾಗವನ್ನು ಕ್ರಿಕೆಟ್ ಸ್ಟೇಡಿಯಂಗೆ ನೀಡಿರುವುದು ಇದೀಗ ವಿವಾದವಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೊದ್ದೂರು ಪಂಚಾಯತಿ ವ್ಯಾಪ್ತಿಯ ದಲಿತ ಕುಟುಂಬಗಳು ಗೋರಿಗಳ ಪಕ್ಕದಲ್ಲೇ ಟೆಂಟ್ ಹಾಕಿ ಧರಣಿ ನಡೆಸುತ್ತಿವೆ. 2008ರಿಂದಲೂ ನೂರಾರು ಕುಟುಂಬಗಳು ಇಲ್ಲಿನ ಸರ್ವೆ ನಂ.167/1ಎ ಯಲ್ಲಿನ ಜಾಗವನ್ನು ಸ್ಮಶಾನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಸ್ಮಶಾನಕ್ಕೆ 2 ಏಕರೆ ಜಾಗದ ಆರ್‍ಟಿಸಿ ನೀಡಿತ್ತು. ಆದರೆ 2016ರಲ್ಲಿ ರಾಜ್ಯ ಸರ್ಕಾರ ಅದೇ ಸರ್ವೆ ನಂಬರಿನಲ್ಲಿ 12.70 ಏಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದು, ಪಾಲೆ ಮಾಡಿನ ಜನರು ಸ್ಮಶಾನವನ್ನು ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿದ್ದಾರೆ.
Advertisement
Advertisement
ಕ್ರಿಕೆಟ್ ಸ್ಟೇಡಿಯಂಗೆ ನೀಡಿರುವ ಜಾಗಕ್ಕೆ ಬದಲಾಗಿ ಸ್ಮಶಾನಕ್ಕೆ ಬೇರೆ ಜಾಗ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ ಗ್ರಾಮಸ್ಥರು ಮಾತ್ರ ಇದೇ ಜಾಗ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸ್ಮಶಾನದ ಜಾಗಕ್ಕೆ ಆರ್‍ಟಿಸಿ ನೀಡಿದ್ದರೂ, ದುರಸ್ತಿ ಮಾಡಿ ನಕ್ಷೆ ಗುರುತಿಸಿರಲಿಲ್ಲ. ಹೀಗಾಗಿ ಕ್ರಿಕೆಟ್ ಸಂಸ್ಥೆ ತನಗೆ ಮಂಜೂರಾದ ಜಾಗವನ್ನು ಬೇಲಿ ಹಾಕಿ ಭದ್ರಪಡಿಸಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಕಳೆದೊಂದು ವಾರದಿಂದ ಅಹೋರಾತ್ರಿ ಉಪವಾಸ ಸತ್ಯಗ್ರಾಹ ನಡೆಸುತ್ತಿದ್ದು, ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
Advertisement
ಜಿಲ್ಲಾಧಿಕಾರಿಗಳು ಬಡ ಗ್ರಾಮಸ್ಥರನ್ನು ನಿರ್ಲಕ್ಷಿಸಿದ ಪರಿಣಾಮ ಇವರ ಸ್ಮಶಾನದ ಜಾಗ ಇದೀಗ ಶ್ರೀಮಂತ ಕ್ರಿಕೆಟ್ ಸಂಸ್ಥೆ ಪಾಲಾಗಿದೆ.