ಚಾಮರಾಜನಗರ: ಫೆ.17 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು (Cabinet Meeting) ಮುಂದೂಡಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಫೆ.16 ರಂದು ಚಾಮರಾಜನಗರದ (Chamarajanagar) ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಜಿಲ್ಲೆಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಮತ್ತು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮ ಸಹ ಮುಂದೂಡಿಕೆಯಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕಾರಣಾಂತರಗಳಿಂದ ದಿನಾಂಕ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಈಗಾಗಲೇ ಸಮಾವೇಶಕ್ಕಾಗಿ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಭಾಗಶಃ ಶಾಮಿಯಾನ ಹಾಕುವ ಕಾರ್ಯ ಮುಕ್ತಾಯಗೊಂಡಿದೆ. ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಸಹ ಇತ್ತು. ಮಲೆ ಮಹದೇಶ್ವರ ಬೆಟ್ಟದಲ್ಲೂ ಕ್ಯಾಬಿನೆಟ್ ಸಭೆಗೆ ಸಿದ್ಧತೆ ನಡೆಯುತ್ತಿದ್ದು ಜರ್ಮನ್ ಟೆಂಟ್ ಹಾಕಲಾಗಿದೆ. ತಾತ್ಕಾಲಿಕ ಹೆಲಿಪ್ಯಾಡ್, ರಸ್ತೆಗಳು, ಮೂಲಸೌಕರ್ಯವನ್ನೂ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಈ ಹೊತ್ತಿನಲ್ಲಿ ಸಭೆ ಮುಂದೂಡಿಕೆಯಾಗಿದೆ.
ಒಟ್ಟಾರೆ ಕ್ಯಾಬಿನೆಟ್ ಸಭೆ ಮೂರು ಬಾರಿ ಮುಂದೂಡಿಕೆ ಆದಂತಾಗಿದೆ. ಜನವರಿ ಮೊದಲನೇ ವಾರ ಬಳಿಕ ಫೆ.14,15 ಅದಾದ ಬಳಿಕ ಫೆ.17,18 ನಿಗದಿಯಾಗಿತ್ತು. ನಂತರ, ಫೆ.16 ರಂದು ಚಾಮರಾಜನಗರದಲ್ಲಿ ಸಮಾವೇಶ ,ಫೆ 17 ಕ್ಕೆ ಸಂಪುಟ ಸಭೆ ಎಂದು ನಿರ್ಧಾರ ಮಾಡಲಾಗಿತ್ತು. ಈಗ, ಈ ದಿನಾಂಕವೂ ಮುಂದೂಡಿಕೆ ಆಗಿದೆ.