ಮಂಡ್ಯ: ರಸ್ತೆ ಡಿವೈಡರಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಯುವತಿ ಪಕ್ಕದ ರಸ್ತೆಗೆ ಬಿದ್ದು, ಆಕೆಯ ಮೇಲೆ ಐರಾವತ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಬಳಿ ನಡೆದಿದೆ.
ಶ್ವೇತಾ (24) ಎಂಬವರೇ ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ. ಬೈಕ್ ಸವಾರ ಮಹೇಶ್ (26) ಎಂಬವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹೇಶ್ ಮತ್ತು ಶ್ವೇತಾ ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್‍ನಲ್ಲಿ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ ಸುಮಾರು ಬೆಳಗ್ಗೆ 7 ಗಂಟೆಗೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂದೆ ಕುಳಿತಿದ್ದ ಶ್ವೇತಾ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಎದುರುಗಡೆಯಿಂದ ಬರುತ್ತಿದ್ದ ಐರಾವತ ಬಸ್ ಶ್ವೇತಾ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮಹೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.