ಭಾರತದಲ್ಲಿ (India) ಕಳೆದ ವರ್ಷ ಉಂಟಾದ ತೀವ್ರ ಮಳೆಯ ಕೊರತೆಯಿಂದಾಗಿ ಅಕ್ಕಿ (Rice) ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ. ಇದರಿಂದ ಕೇಂದ್ರದ ದಾಸ್ತಾನಿನಲ್ಲಿ ಕಡಿಮೆ ಪ್ರಮಾಣದಲ್ಲಿ ಅಕ್ಕಿ ಸಂಗ್ರಹವಾಗಿದೆ. ಇದೇ ಕಾರಣಕ್ಕೆ ದೇಶದಲ್ಲಿ ಆಹಾರ ಭದ್ರತೆಗೆ ಧಕ್ಕೆಯಾಗದಂತೆ ಹಾಗೂ ದೇಶದ ಒಳಗಡೆ ಬೆಲೆಯಲ್ಲಿ ಏರಿಕೆಯಾಗದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಕೆಲವು ಅಕ್ಕಿ ತಳಿಗಳ ರಫ್ತಿನ ಮೇಲೆ ಕೇಂದ್ರ ನಿಷೇಧ(Rice Exports Ban) ಹೇರಿದೆ.
2023-24ರ ಖಾರಿಫ್ ಅಕ್ಕಿ ಉತ್ಪಾದನೆ 1063.13 ಲಕ್ಷ ಮೆಟ್ರಿಕ್ ಟನ್‍ಗಳಷ್ಟಿರುವ ಅಂದಾಜಿದೆ. ಕಳೆದ ವರ್ಷ ಇದೇ ಋತುವಿನಲ್ಲಿ ದಾಖಲಾದ 1105.12 ಲಕ್ಷ ಮೆಟ್ರಿಕ್ ಟನ್‍ಗಿಂತ ಇದು 3.7% ಕಡಿಮೆಯಾಗಿದೆ. ಈ ಪ್ರಮಾಣದ ಉತ್ಪಾದನೆಯ ಇಳಿಕೆ ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲವನ್ನು ಸೃಷ್ಟಿಸಿದೆ. ಭಾರತ ಕೈಗೊಂಡ ಬಾಸ್ಮತಿ ಅಕ್ಕಿ ಹೊರತು ಪಡಿಸಿ ಬಿಳಿಯ ಅಕ್ಕಿ ರಫ್ತಿನ ಮೇಲಿನ ನಿರ್ಬಂಧದಿಂದ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಪೂರೈಕೆ, ಲಭ್ಯತೆ ಮತ್ತು ಬೆಲೆಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬ ಮಾಹಿತಿ ಇಲ್ಲಿದೆ.
ಭಾರತದ ನಿರ್ಬಂಧ ಜಗತ್ತಿನಾದ್ಯಂತ ಅಕ್ಕಿಯ ಬೆಲೆಗಳನ್ನು ಹೆಚ್ಚಿಸಿವೆಯೇ?
ಜುಲೈನಲ್ಲಿ ಭಾರತ ಬಿಳಿ ಅಕ್ಕಿಯ ರಫ್ತು ನಿಷೇಧಿಸಿದ ನಂತರ ಮಾರುಕಟ್ಟೆಯಾದ್ಯಂತ ಅಕ್ಕಿ ಬೆಲೆಯಲ್ಲಿ ತೀವ್ರ ಜಿಗಿತ ಕಂಡುಬಂದಿದೆ. ಇದು ಮುಖ್ಯವಾಗಿ ಅಮೆರಿಕದ ಭಾರತೀಯರ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ನಿಷೇಧದಿಂದ ಅತಿ ದೊಡ್ಡ ರಫ್ತು ಕೇಂದ್ರಗಳಾದ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಹೆಚ್ಚಿನ ಹೊಡೆತ ಬೀಳಲಿದೆ. ಆಫ್ರಿಕಾದ ದೇಶಗಳೂ ಭಾರತದ ಅಕ್ಕಿಯನ್ನು ನೆಚ್ಚಿಕೊಂಡಿದ್ದವು. ಈಗ ಥೈಲ್ಯಾಂಡ್, ವಿಯೆಟ್ನಾಂನಂತಹ ಇತರೆ ಪರ್ಯಾಯ ದೇಶಗಳ ಕಡೆ ಮುಖ ಮಾಡಬೇಕಾಗಿದೆ. ಇದು ಅಕ್ಕಿಯ ಕೊರತೆ ಮಾತ್ರವಲ್ಲದೆ ಬೆಲೆ ಎರಿಕೆಗೂ ಕಾರಣವಾಗಿದೆ.
ಅಕ್ಕಿ ರಫ್ತಿನ ಪೈಪೋಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ
ಜಾಗತಿಕ ಅಕ್ಕಿ ರಫ್ತಿನಲ್ಲಿ ಭಾರತವು 40%ಕ್ಕಿಂತಲೂ ಹೆಚ್ಚಿನ ಪಾಲನ್ನು ಹೊಂದಿದೆ. 2022ರಲ್ಲಿ 5.9 ಕೋಟಿ ಮೆಟ್ರಿಕ್ ಟನ್‍ನಷ್ಟು ಅಕ್ಕಿ ರಫ್ತು ಮಾಡಲಾಗಿದೆ. ನಂತರದ ನಾಲ್ಕು ಅಕ್ಕಿ ಉತ್ಪಾದನಾ ದೇಶಗಳಾದ ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಮತ್ತು ಅಮೆರಿಕದ ಒಟ್ಟಾರೆ ರಫ್ತಿಗಿಂತಲೂ ಭಾರತದ ರಫ್ತು ಹೆಚ್ಚಿತ್ತು.
ಭಾರತವು 2022ರಲ್ಲಿ 2ಕೋಟಿ ಟನ್‍ನಷ್ಟು ಬಾಸ್ಮತಿ ಹೊರತುಪಡಿಸಿದ ಅಕ್ಕಿಯನ್ನು ರಫ್ತು ಮಾಡಿದೆ. ಇದರಲ್ಲಿ 1.3 ಕೋಟಿ ಟನ್‍ನಷ್ಟು ಬಾಸ್ಮತಿಯಲ್ಲದ ಬಿಳಿ ಅಕ್ಕಿ ಸೇರಿದೆ. 2022ರ ಸೆಪ್ಟೆಂಬರ್‍ನಲ್ಲಿ ಭಾರತವು ನುಚ್ಚಕ್ಕಿ ರಫ್ತು ನಿಷೇಧ ಮಾಡಿತ್ತು. ಹಾಗೆಯೇ ವಿವಿಧ ಶ್ರೇಣಿಯ ಅಕ್ಕಿ ಮೇಲೆ 20%ರಷ್ಟು ಟ್ಯಾಕ್ಸ್ ವಿಧಿಸಿತ್ತು. ಸರ್ಕಾರವು ಬಾಸ್ಮತಿ ಅಕ್ಕಿ ಹಾಗೂ ಕುಚ್ಚಲಕ್ಕಿ ರಫ್ತಿನ ಮೇಲೆ ಯಾವುದೇ ನಿಷೇಧ ವಿಧಿಸಿಲ್ಲ. 2022ರಲ್ಲಿ ಈ ಅಕ್ಕಿಗಳ ರಫ್ತು ಕ್ರಮವಾಗಿ 40 ಲಕ್ಷ ಟನ್ ಮತ್ತು 70 ಲಕ್ಷ ಟನ್ ಆಗಿತ್ತು.
ಭಾರತದಲ್ಲಿ ಹೆಚ್ಚಿನ ಭಾಗಗಳಲ್ಲಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯಲಾಗುತ್ತದೆ. ಜೂನ್‍ನಲ್ಲಿ ಬಿತ್ತುವ ಭತ್ತ ಉತ್ಪಾದನೆಯ 80%ನಷ್ಟು ಇಳುವರಿ ನೀಡುತ್ತದೆ. ಚಳಿಗಾಲದ ತಿಂಗಳುಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚಾಗಿ ಎರಡನೇ ಬೆಳೆಯಾಗಿ ಕೂಡ ಭತ್ತವನ್ನು ಬೆಳೆಯಲಾಗುತ್ತದೆ.
ಪಶ್ಚಿಮ ಬಂಗಾಳ ಹೆಚ್ಚಿನ ಭತ್ತ ಬೆಳೆಯುವ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್, ಒಡಿಶಾ ಮತ್ತು ಛತ್ತೀಸಗಡ ದೇಶದಲ್ಲಿ ಪ್ರಮುಖವಾಗಿ ಅಕ್ಕಿ ಬೆಳೆಯುವ ರಾಜ್ಯಗಳಾಗಿವೆ. ಈ ರಾಜ್ಯಗಳು ಬೆಳೆಯುವ ಭತ್ತದಿಂದಾಗಿ ಭಾರತ ಅಕ್ಕಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೀನಾ ಅಕ್ಕಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಭತ್ತ ಬೆಳೆಯುವ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ 2,183 ರೂ. ಹೆಚ್ಚುವರಿ ಹಣವನ್ನು ನೀಡಿ ಖರೀದಿ ಮಾಡುತ್ತಿದೆ.
ರಫ್ತು ನಿಷೇಧ ಯಾಕೆ?
ಈ ಬಾರಿ ಮುಂಗಾರಿನ ಆಗಮನ ವಿಳಂಬವಾಗಿದೆ. ಅಲ್ಲದೇ ಕೆಲವೆಡೆ ಭಾರೀ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಈ ರಫ್ತು ನಿಷೇಧದ ಹಿಂದಿನ ಉದ್ದೇಶವಾಗಿದೆ.
ಇತರ ರಫ್ತು ರಾಷ್ಟ್ರಗಳ ಮೇಲೆ ಒತ್ತಡ
ಭಾರತವು ಅಕ್ಕಿ ರಫ್ತಿನಿಂದ ಹೊರಗುಳಿದಿರುವುದರಿಂದ ಇತರ ಅಕ್ಕಿ ರಫ್ತು ಮಾಡುವ ದೇಶಗಳು ಜಾಗತಿಕ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಿದೆ. ಇದು ದೀರ್ಘಾವಧಿಯಲ್ಲಿ ಕೊರತೆಗೆ ಕಾರಣವಾಗಬಹುದು.
ಏನೇನು ಪರಿಣಾಮ ಆಗಬಹುದು?
ಹೆಚ್ಚುತ್ತಿರುವ ಆಹಾರದ ಬೆಲೆಗಳು, ಹಣದುಬ್ಬರಕ್ಕೆ ಕಾರಣವಾಗಬಹುದು. ಆಹಾರದ ಕೊರತೆ ಮತ್ತು ಬೆಲೆ ಏರಿಕೆಗಳು ಪ್ರತಿಭಟನೆಗಳು ರಾಜಕೀಯ ಅಸ್ಥಿರತೆಗೆ ಕಾರಣವಾಗಬಹುದು. ಅನೇಕ ಸಂಸ್ಥೆಗಳು ಆಹಾರ ನೆರವು ಕಾರ್ಯಕ್ರಮಗಳಲ್ಲಿ ಪ್ರಮುಖ ಅಕ್ಕಿಯನ್ನು ಅವಲಂಬಿಸಿವೆ. ಅಕ್ಕಿ ಪೂರೈಕೆಯಲ್ಲಿನ ಈ ವ್ಯತ್ಯಯ ಈ ಕಾರ್ಯಕ್ರಮಕ್ಕೆ ತೊಡಕಾಗಬಹುದು.
ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ಸಂಕೀರ್ಣ ಮತ್ತು ಸೂಕ್ಷ್ಮವಾಗಿವೆ. ಅಕ್ಕಿ ನಿಷೇಧದಂತಹ ಹಠಾತ್ ನೀತಿ ಬದಲಾವಣೆಯು ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ತಗ್ಗಿಸಬಹುದು.