ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣದ ಕಾಡಿನ ಮಧ್ಯೆ ಸುಂದರವಾದ ಜಲಪಾತವಿದೆ. ಸುತನಬ್ಬೆ ಜಲಪಾತ ಎಂದೂ ಕರೆಯಲ್ಪಡುವ ಈ ಹನುಮನಗುಂಡಿ ಜಲಪಾತವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ನೀವು ಪ್ರಕೃತಿ ಪ್ರಿಯರಾಗಿದ್ದರೆ ಮತ್ತು ಪ್ರಕೃತಿಯೊಂದಿಗೆ ನಿಮ್ಮ ರಜಾದಿನವನ್ನು ಆನಂದಿಸಲು ಬಯಸಿದರೆ ಈ ಸ್ಥಳ ಉತ್ತಮ ಆಯ್ಕೆಯಾಗಿದೆ. ಇದು ನಿಸರ್ಗದ ನಡುವೆ ನಿಮಗೆ ವಿಶ್ರಾಂತಿಯನ್ನು ಒದಗಿಸುತ್ತದೆ. ಕಾಡುಗಳ ಮಧ್ಯೆ ನೀವು ಮೋಜಿನ ದಿನವನ್ನು ಕಳೆಯಬಹುದು.
ಇದು ನೈಸರ್ಗಿಕ ಬಂಡೆಗಳ ಮೇಲೆ ಧುಮುಕುವ ಶ್ರೇಣೀಕೃತ ಜಲಪಾತವಾಗಿದ್ದು, ಹಚ್ಚ ಹಸಿರಿನ ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರಿದ ಪ್ರಶಾಂತ ಸ್ಥಳದಲ್ಲಿದೆ. ಕಾರ್ಕಳ ಮತ್ತು ಲಕ್ಯಾ ಅಣೆಕಟ್ಟುಗಳ ನಡುವೆ ಇರುವ ಹನುಮನಗುಂಡಿ ನಿಷ್ಕಲ್ಮಷ ಜಲಪಾತದ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಜಲಪಾತವು ಮಂಗಳೂರು-ಶೋಲಾಪುರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ. ಆದರೆ ರಸ್ತೆಯಿಂದಾಗಿ ಅದು ಗೋಚರಿಸುವುದಿಲ್ಲ. ಜಲಪಾತದ ಸ್ಥಳದಲ್ಲಿ ಸಣ್ಣ ಬೋರ್ಡ್ ಇದೆ.
Advertisement
ಜಲಪಾತದ ಬುಡಕ್ಕೆ ಹೋಗಬೇಕೆಂದರೆ ನೀವು ಅರಣ್ಯ ಇಲಾಖೆಯ ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. ಜಲಪಾತದ ನೋಟವನ್ನು ಸವಿಯಲು ಸುಮಾರು 300 ಮೆಟ್ಟಿಲುಗಳ ಮೂಲಕ ಸಾಗಬೇಕು. ನೈಸರ್ಗಿಕ ಸೌಂದರ್ಯದಿಂದ ತುಂಬಿರುವ ಉತ್ತಮ ಪ್ರವಾಸಿ ತಾಣವಾಗಿದ್ದು, ಅಕ್ಟೋಬರ್‍ನಿಂದ ಫೆಬ್ರವರಿ ಅವಧಿಯಲ್ಲಿ ಈ ಸ್ಥಳವು ಪ್ರವಾಸಿಗರಿಂದ ತುಂಬಿರುತ್ತದೆ. ಪ್ರವಾಸಿಗರಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಉಳಿಯಲು ಅನುಮತಿಸಲಾಗುವುದಿಲ್ಲ. ಆದರೆ ಒಂದು ದಿನ ಅಂದರೆ ಬೆಳಗ್ಗೆಯಿಂದ ಸಂಜೆಯವರಗೆ ಅಲ್ಲಿನ ಪ್ರಕತಿ ಸೌಂದರ್ಯವನ್ನು ಸವಿಯಬಹುದು.
Advertisement
ಸ್ಥಳದ ವಿಶೇಷತೆ ಏನು?: ಸ್ಥಳೀಯರ ಪ್ರಕಾರ, ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುವಾಗ ಈ ಸ್ಥಳದಲ್ಲಿ ತನ್ನ ಕಾಲನ್ನಿಟ್ಟು ಮುಂದೆ ಸಾಗಿದ್ದಾನೆ. ಹೀಗಾಗಿ ಹನುಂತನಿಂದ ಈ ಗುಂಡಿ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಹನುಮಂತನಿಂದ ಗುಂಡಿ ಸೃಷ್ಟಿಯಾದ ಕಾರಣ ಹನುಮನ ಗುಂಡಿ ಎಂದು ಕರೆಯಲಾಗುತ್ತದೆ. ಅಲ್ಲದೇ ಈ ಜಲಪತಾದ ರಚನೆಯು ಪಾದದ ಆಕಾರದಲ್ಲಿ ಕಾಣಿಸುತ್ತದೆ ಎನ್ನುವುದು ಈ ಸ್ಥಳದ ವಿಶೇಷತೆಯಾಗಿದೆ.
Advertisement
ಹೋಗುವುದು ಹೇಗೆ?: ವಿಮಾನದಲ್ಲಿ ಬೆಂಗಳೂರಿನಿಂದ ಬಂದರೆ ಮಂಗಳೂರು ವಿಮಾನ ನಿಲ್ದಾಣದಿಂದ ಹನುಮನ ಗುಂಡಿ ಜಲಪಾತಕ್ಕೆ 150 ಕಿ.ಮೀ. ಇದ್ದು, ಅಲ್ಲಿಂದ ಬಸ್ ಅಥವಾ ಕಾರಿನ ಮೂಲಕ ಬರಬಹುದು. ರಸ್ತೆಯ ಮೂಲಕ ಬರುವುದಾದರೆ ಶೃಂಗೇರಿಯಿಂದ 26 ಕಿಮೀ ಮತ್ತು ಕುದುರೆಮುಖದಿಂದ 15 ಕಿಮೀ ದೂರ ಇದೆ. ಚಿಕ್ಕಮಗಳೂರಿನ ಬೀರೂರು ಜಲಪಾತಗಳಿಗೆ ಹತ್ತಿರದ ನಿಲ್ದಾಣವಾಗಿದೆ. ಬೀರೂರು ರಸ್ತೆಯ ಮೂಲಕ ಬೆಂಗಳೂರು ಮತ್ತು ಇತರ ಸ್ಥಳಗಳಿಗೆ ಉತ್ತಮ ಸಂಪರ್ಕವಿದೆ. ಬೆಂಗಳೂರಿಂದ 248 ಕಿ.ಮೀ ಮತ್ತು ಮಂಗಳೂರಿನಿಂದ 150 ಕಿ.ಮೀ. ಕ್ರಮಿಸಿದರೆ ಈ ಜಲಪಾತವನ್ನು ವೀಕ್ಷಿಸಬಹುದಾಗಿದೆ.
Advertisement
ಇದು ಕುದುರೆಮುಖ ಪಟ್ಟಣದಿಂದ ಸರಿಸುಮಾರು 20 ಕಿಮೀ ದೂರದಲ್ಲಿದೆ. 22 ಮೀಟರ್ ಎತ್ತರದಿಂದ ಕೆಳಗೆ ಬೀಳುವ ನೀರು ನೈಸರ್ಗಿಕ ಬಂಡೆಗಳ ಮೇಲೆ ಭವ್ಯವಾಗಿ ಬೀಳುವ ಒಂದು ರೋಮಾಂಚನಕಾರಿ ನೋಟ. ಈ ಸ್ಥಳದಲ್ಲಿ ನೀವು ಸ್ನಾನವನ್ನು ಮಾಡಬಹುದು. ಜಲಪಾತದ ಶಾಂತ ಮತ್ತು ಅದ್ಭುತ ಸೌಂದರ್ಯವನ್ನು ಆನಂದಿಸಬಹುದು. ಮಳೆಗಾಲದ ಸಮಯದಲ್ಲಿ ಮತ್ತು ನಂತರ ಈ ಜಲಪಾತಗಳಿಗೆ ಭೇಟಿ ನೀಡುವುದು ಅದ್ಭುತವಾಗಿದೆ, ಏಕೆಂದರೆ ಜಲಪಾತವು ಸಂಪೂರ್ಣ ವೈಭವದಿಂದ ಕೂಡಿರುತ್ತದೆ.
ಬಸ್ಸುಗಳ ಮೂಲಕವಾದರೆ ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಕುದುರೆಮುಖ ಪಟ್ಟಣಕ್ಕೆ ನೀವು ಅನೇಕ ಬಸ್ಸುಗಳನ್ನು ಕಾಣಬಹುದು. ಕುದುರೆಮುಖದಿಂದ ನೀವು ಪ್ರವೇಶ ದ್ವಾರಕ್ಕೆ ಟ್ಯಾಕ್ಸಿ ಪಡೆಯಬಹುದು. ಜಲಪಾತವು ಪ್ರವೇಶದ್ವಾರದಿಂದ 3-4 ಕಿಮೀ ದೂರದಲ್ಲಿದೆ, ನೀವು ಅರಣ್ಯ ಇಲಾಖೆಯ ಜೀಪ್ ಮೂಲಕ ಕ್ರಮಿಸಬಹುದು.
ಫಾಲ್ಸ್ ವೀಕ್ಷಿಸಲು ಸಮಯ: ಹನುಮನ ಗುಂಡಿ ಫಾಲ್ಸ್ ವೀಕ್ಷಿಸಲು ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಅವಕಾಶವಿದೆ. ಇನ್ನು ಹನುಮಾನ್ ಗುಂಡಿ ಜಲಪಾತವು ವರ್ಷವಿಡೀ ಪ್ರವೇಶಿಸಬಹುದಾದರೂ, ಮಳೆಗಾಲದ ನಂತರದ ತಿಂಗಳುಗಳಲ್ಲಿ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಹಾದಿಯು ಕೆಸರುಮಯವಾಗಿಲ್ಲ ಮತ್ತು ಮೆಟ್ಟಿಲುಗಳು ಜಾರುವುದಿಲ್ಲ. ನೀವು ಚಳಿಗಾಲ ಮತ್ತು ವಸಂತಕಾಲದಲ್ಲಿ ಸಹ ಭೇಟಿ ನೀಡಬಹುದು. ಒಟ್ಟಿನಲ್ಲಿ ಹನುಮಾನ್ ಗುಂಡಿ ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ ನಿಂದ ಏಪ್ರಿಲ್ ಆಗಿದೆ.
ಪ್ರವೇಶ ಶುಲ್ಕ ಎಷ್ಟಿರುತ್ತೆ?: ಫಾಲ್ಸ್ ಅನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಹೀಗಾಗಿ ಪ್ರವೇಶ ಪರವಾನಿಗೆಯಾಗಿ ಪ್ರತಿ ವ್ಯಕ್ತಿಗೆ 50 ರೂ. ಶುಲ್ಕವನ್ನು ವಿಧಿಸುತ್ತದೆ. ವಾಹನ ನಿಲುಗಡೆಗೆ 20-30 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ಜಲಪಾತದ ಬಳಿ ಯಾವುದೇ ಅಂಗಡಿಗಳು ಇಲ್ಲ. ಹೀಗಾಗಿ ಊಟ, ತಿಂಡಿಯ ವ್ಯವಸ್ಥೆಯನ್ನು ಮಾಡಿಕೊಂಡು ಹೋಗಬೇಕು. ಒಟ್ಟಿನಲ್ಲಿ ಪ್ರಕೃತಿಯನ್ನು ಇಷ್ಟಪಡುವವರಿಗೆ ಹನುಮನ ಗುಂಡಿ ಜಲಪಾತ ಇಷ್ಟವಾಗುವುದಂತೂ ಪಕ್ಕಾ.