– ಕನ್ನಡ ಬರಲ್ಲ ಕ್ಷಮಿಸಿ ಹಿಂದಿಯಲ್ಲಿ ಮಾತಾಡ್ತೀನಿ
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಂತೆಯೇ ಆಮ್ ಆದ್ಮಿ ಪಾರ್ಟಿ ಸಿದ್ಧಗೊಂಡಿದೆ. ಇದೇ ಮೊದಲ ಬಾರಿಗೆ ಆಪ್ ಸಂಚಾಲಕ ಕೇಜ್ರಿವಾಲ್ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ನಡೆಸಿದ್ದಾರೆ. ಕರ್ನಾಟಕದಲ್ಲಿ ಆಪ್ ಸರ್ಕಾರ ಬರಬೇಕು. ನಾವು ಇಲ್ಲಿ ಸರ್ಕಾರ ರಚನೆ ಮಾಡೋಣ. ಈ ಮೂಲಕ 20%, 40% ದಂಧೆಗಳಿಗೆ ಕಡಿವಾಣ ಹಾಕೋಣ ಎಂದು ಕಹಳೆ ಊದಿದ್ದಾರೆ.
Advertisement
ಬಸವನ ಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಇಂದು ಆಪ್ ವತಿಯಿಂದ ರೈತ ಸಮಾವೇಶ ನಡೆಯಿತು. ಈ ವೇಳೆ ಕೇಜ್ರಿವಾಲ್ ಅವರಿಗೆ ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲು ಹಾಕಿದರೆ ಕೆಲ ದಿನಗಳ ಹಿಂದೆ ಆಪ್ ಸೇರಿದ್ದ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬೃಹತ್ ಹೂವಿನ ಹಾರವನ್ನು ಹಾಕಿ ಸನ್ಮಾನಿಸಿದರು. ಕಾರ್ಯಕ್ರಮವನ್ನು ಕೇಜ್ರಿವಾಲ್ ಆವರು ವಿವಿಧ ಧಾನ್ಯಗಳು ಮತ್ತು ತರಕಾರಿಗಳ ರಾಶಿಗೆ ಪೂಜೆ ಮಾಡುವ ಮೂಲಕ ಬೃಹತ್ ರೈತ ಸಮಾವೇಶ ಉದ್ಘಾಟಿಸಿದರು. ಇದನ್ನೂ ಓದಿ: ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ
Advertisement
Advertisement
ಭಾಷಣ ಪ್ರಾರಂಭ ಮಾಡುವುದಕ್ಕೂ ಮುನ್ನ ಕೇಜ್ರಿವಾಲ್, ನನಗೆ ಕನ್ನಡ ಬರಲ್ಲ ಕ್ಷಮಿಸಿ ಹಿಂದಿಯಲ್ಲಿ ಮಾತಾಡ್ತೀನಿ. ಎರಡು ದಿನಗಳಿಂದ ನನಗೆ ತೀವ್ರ ಹಲ್ಲು ನೋವು. ನಾನು ಪೇನ್ ಕಿಲ್ಲರ್ ಸೇವಿಸಿ ಇಲ್ಲಿಗೆ ಬಂದಿದ್ದೇನೆ. ಆಪ್ ಪಕ್ಷಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಎಂದು ಹೇಳಿ ನಂತರ ಭಾಷಣ ಮಾಡಲು ಪ್ರಾರಂಭ ಮಾಡಿದರು.
Advertisement
ಕರ್ನಾಟಕದಲ್ಲಿ ಆಪ್ ಅಧಿಕಾರಕ್ಕೆ ಬರಬೇಕು. ನಾವು ಇಲ್ಲಿ ಸರ್ಕಾರ ರಚನೆ ಮಾಡೋಣ. 20%, 40% ದಂಧೆಗಳಿಗೆ ಕಡಿವಾಣ ಹಾಕೋಣ ಎಂದು ಕರೆ ಕೊಟ್ಟರು. ಇಡೀ ದೇಶದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಚೆನ್ನಾಗಿಲ್ಲ. ದೆಹಲಿಯಲ್ಲಿ ಮಾತ್ರ ಉತ್ತಮ ಸರ್ಕಾರಿ ಶಾಲೆಗಳಿವೆ. ಇಂಥ ಸರ್ಕಾರಿ ಶಾಲೆಗಳನ್ನು ಕರ್ನಾಟಕದಲ್ಲೂ ಮಾಡೋಣ. ದೆಹಲಿಯಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ಸೇವೆಗಳನ್ನ ಕೊಡ್ತಿದ್ದೇವೆ. ಆಸ್ಪತ್ರೆಯಲ್ಲಿ ಹೈಟೆಕ್ ಸೇವೆ ಸಿಗ್ತಿದೆ. ವಿದ್ಯುತ್ ದೆಹಲಿಯಲ್ಲಿ ಉಚಿತ. ಸರ್ಕಾರಿ ಶಾಲೆ, ವಿದ್ಯುತ್, ಆರೋಗ್ಯ, ನೀರು, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ. ಇದು ಆಗಿದ್ದು ಒಂದು ಪ್ರಾಮಾಣಿಕ ರಾಜಕೀಯ ಪಕ್ಷ ಆಪ್ ನಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಮನುಷ್ಯ ಅಹಂಕಾರ ಪಡಬಾರದು. ರಾವಣನೂ ಅಹಂಕಾರದಲ್ಲಿ ಮೆರೆದಿದ್ದ, ಸೀತೆ ಅಪಹರಣ ವೇಳೆ ರಾಮನ ಜೊತೆ ಸಂಘರ್ಷ ಬೇಡ ಎಂದು ವಿಭೀಷಣ ಹೇಳಿದ್ದ. ಆದರೆ ರಾವಣ ಒಪ್ಲಿಲ್ಲ, ಅಂತ್ಯ ಏನಾಯಿತು ಅಂತ ಎಲ್ಲರಿಗೂ ಗೊತ್ತಿದೆ. ಇದೇ ಥರ ಕೇಂದ್ರಕ್ಕೂ ಅಹಂಕಾರ ಇತ್ತು. ಮೂರು ರೈತ ವಿರೋಧಿ ಕಾನೂನು ತಂದ್ರು, ಎಷ್ಟೇ ಹೇಳಿದ್ರೂ ಕೇಂದ್ರ ಕೇಳಲಿಲ್ಲ. ರೈತರ ವಿರುದ್ಧ ನಡೆ ಬೇಡ ಅಂದ್ರೂ ಕೇಂದ್ರ ಕೇಳಿರಲಿಲ್ಲ. ಕೊನೆಗೂ 13 ತಿಂಗಳ ಬಳಿಕ ಕೇಂದ್ರದ ಅಹಂಕಾರ ಭಂಗವಾಯ್ತು. ಮೂರು ಕಾಯ್ದೆ ಕೇಂದ್ರ ವಾಪಸ್ ಪಡೆಯಿತು ಎಂದು ವಿವರಿಸಿದರು.
ಸ್ವಾತಂತ್ರ್ಯ ಬಂದಾಗಿಂದಲೂ ರೈತರ ಸ್ಥಿತಿ ಉತ್ತಮವಾಗಿಲ್ಲ. ನಾನು ಅಣ್ಣಾ ಹಜಾರೆ ಜೊತೆ ಹೋರಾಟ ಮಾಡ್ಕೊಂಡಿದ್ದೆ. ಭ್ರಷ್ಟಾಚಾರ ತೊಲಗಿಸಿ ಅಂತ ಅಣ್ಣಾಗೆ ಹೇಳಿದ್ದೆ ನಾನು. ಆಗ ಅವರು ನೀನು ಚುನಾವಣೆ ಗೆದ್ದು ಭ್ರಷ್ಟಾಚಾರ ಓಡಿಸು ಎಂದಿದ್ದರು. ನಾನು ಸಾಮಾನ್ಯ ಮನುಷ್ಯನನ್ನ ಕೆಣಕಬೇಡಿ ಅಂದೆ. ಅದರ ಪರಿಣಾಮ ಮೊದಲು ದೆಹಲಿಯಲ್ಲಿ ನಂತರ ಪಂಜಾಬ್‍ನಲ್ಲಿ ಆಪ್ ಸರ್ಕಾರ ರಚನೆಯಾಯಿತು. ಈಗ ನಮ್ಮ ಆದ್ಯತೆ ಕರ್ನಾಟಕ ಎಂದು ಹೇಳಿದರು.
ಕಾಂಗ್ರೆಸ್ ಇಲ್ಲಿ 20% ಸರ್ಕಾರ ಇತ್ತು. ಈಗ 40% ಸರ್ಕಾರ ಇದೆ. ದೆಹಲಿಯಲ್ಲಿ 0% ಸರ್ಕಾರವಿದೆ. ಖುದ್ದು ಪ್ರಧಾನಿ ಮೋದಿ ನನಗೆ ಪ್ರಾಮಾಣಿಕ ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನನ್ನ ಮನೆ, ಕಚೇರಿ ಮೇಲೆ ಐಟಿ ದಾಳಿ ಆಯ್ತು. ಅವರಿಗೆ ಏನೂ ಸಿಕ್ಲಿಲ್ಲ. ಪರಿಣಾಮವಾಗಿ ಮೋದಿ ನನಗೆ ಪ್ರಾಮಾಣಿಕ ಸರ್ಟಿಫಿಕೇಟ್ ಕೊಡ್ಬೇಕಾಯ್ತು. ಮನೀಷ್ ಸಿಸೋಡಿಯಾ ಮೇಲೂ ಐಟಿ ದಾಳಿ ಆಯ್ತು. ನನ್ನ 20 ಶಾಸಕರ ಮನೆ ಮೇಲೂ ಐಟಿ ದಾಳಿ ಆಯ್ತು. ಆಗಲೂ ಅವರಿಗೆ ಏನೂ ಸಿಕ್ಲಿಲ್ಲ ಎಂದರು. ಇದನ್ನೂ ಓದಿ: ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಬದ್ಧ: ಸಿಎಂ
ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರ ಮೇಲೆ ಸಚಿವರೊಬ್ಬರ ಮಗ ವಾಹನ ಹರಿಸಿದ. ಆ ಯುವಕನಿಗೆ ಬಹುಮಾನ ಕೊಡಲಾಯ್ತು, ಆತನ ತಂದೆ ಮಂತ್ರಿ ಇಂಥ ರಾಜ್ಯ ಹೇಗೆ ಮುಂದೆ ಬರಲು ಸಾಧ್ಯ. ಗೂಂಡಾಗಳು, ಭ್ರಷ್ಟಾಚಾರಿಗಳು, ಬಲಾತ್ಕಾರಿಗಳು ಬಿಜೆಪಿ ಸೇರ್ತಿದ್ದಾರೆ. ಬಲಾತ್ಕಾರಿಗಳ ಪರ ಆ ಪಕ್ಷದವರೆಲ್ಲ ಬೆಂಬಲಕ್ಕೆ ನಿಲ್ತಾರೆ. ಇಡೀ ದೇಶದಲ್ಲಿ ದಂಗೆ ಆಗ್ತಿದೆ. ದೆಹಲಿಯಲ್ಲಿ ಆಗ್ತಿಲ್ಲ. ದಂಗೆ ಮಾಡಿಸ್ತಿರೋರು ಬಿಜೆಪಿಯವರು. ನಿಮಗೆ ಶಾಲೆ, ಆಸ್ಪತ್ರೆ, ವಿದ್ಯುತ್, ನೀರು ಬೇಕು ಅಂದ್ರೆ ನಮಗೆ ಮತ ಕೊಡಿ. ನಿಮಗೆ ಗೂಂಡಾಗಿರಿ ಬೇಕು ಅಂದ್ರೆ ಬಿಜೆಪಿಗೆ ಮತ ಕೊಡಿ. ಇಡೀ ದೇಶದ ರೈತರು ಆಪ್ ಸೇರಬೇಕು. ರೈತ ನೆಮ್ಮದಿ ಆಗುವವರೆಗೂ ದೇಶಕ್ಕೆ ನೆಮ್ಮದಿ ಇಲ್ಲ ಎಂದು ಕರೆ ಕೊಟ್ಟರು.
ಈ ವೇಳೆ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿಯೇ ನಿವೃತ್ತ ಕೆಎಎಸ್ ಅಧಿಕಾರ ಕೆ.ಮಥಾಯಿ ಆಪ್ ಪಕ್ಷವನ್ನು ಸೇರಿದರು. ಇದೇ ವೇಳೆ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಆಮ್ ಆದ್ಮಿ ಪಾರ್ಟಿ ಸೇರಿದರು.