ಹಾವೇರಿ: ಆಟವಾಡುತ್ತಿದ್ದಾಗ ಮನೆಮುಂದೆ ಇದ್ದ ವಿದ್ಯುತ್ ತಂತಿಯನ್ನು ಮುಟ್ಟಿದ ಪರಿಣಾಮ ಎಂಟು ವರ್ಷದ ಬಾಲಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜೇಕಿನಕಟ್ಟಿ ತಾಂಡಾದಲ್ಲಿ ನಡೆದಿದೆ.
ಮೃತ ಬಾಲಕನನ್ನ ದಿಗಂತ ನಾಯಕ(8) ಎಂದು ಗುರುತಿಸಲಾಗಿದೆ. ಮನೆ ಮುಂದೆ ಆಟ ಆಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಳೆ ಬಂದಿದ್ದ ಪರಿಣಾಮ ವಿದ್ಯುತ್ ಕಂಬ ಹಸಿಯಾಗಿತ್ತು. ಆದ್ದರಿಂದ ಕಂಬಕ್ಕೆ ಅಳವಡಿಸಿದ್ದ ತಂತಿ ಮೂಲಕ ವಿದ್ಯುತ್ ಹರಿಯುತಿತ್ತು. ಈ ಬಗ್ಗೆ ಅರಿವಿರದ ಪುಟ್ಟ ಬಾಲಕ ತಂತಿಯನ್ನು ಮುಟ್ಟಿ ಮೃತಪಟ್ಟಿದ್ದಾನೆ. ಬಾಲಕನ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಈ ವಿಷಯ ತಿಳಿಯುತ್ತಿದ್ದಂತೆ ಶಿಗ್ಗಾಂವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.