ಬೆಂಗಳೂರು: ಶಶಾಂಕ್ ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿರೋ ಚಿತ್ರ ತಾಯಿಗೆ ತಕ್ಕ ಮಗ. ಅಗಾಧವಾದ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ಚಿತ್ರ ತೆರೆ ಕಂಡಿದೆ. ಪ್ರೇಕ್ಷಕರು ಯಾವ ಕುತೂಹಲವಿಟ್ಟುಕೊಂಡು ಕಾತರರಾಗಿದ್ದರೋ ಅದನ್ನು ಈ ಚಿತ್ರ ತಣಿಸುವಂತೆಯೇ ಮೂಡಿ ಬಂದಿದೆ.
ಆಕೆ ವಕೀಲ ವೃತ್ತಿಯನ್ನು ನ್ಯಾಯಕ್ಕಾಗಿಯೇ ಮುಡಿಪಾಗಿಟ್ಟ ತಾಯಿ. ಎಂಥಾ ಸಂದರ್ಭದಲ್ಲಿಯಾದರೂ ಅನ್ಯಾಯದ ವಿರುದ್ಧ ಕಾನೂನು ಸಮರ ನಡೆಸುವ ಗಟ್ಟಿಗಿತ್ತಿಯಾದ ಆಕೆಗೊಬ್ಬ ಮಗ. ಅವನು ಮೋಹನದಾಸ. ಅಮ್ಮ ಅಂದರೆ ಈತನ ಪ್ರಪಂಚ. ನ್ಯಾಯ, ನೀತಿಯ ವಿಚಾರದಲ್ಲಿ ಮಾತ್ರವಲ್ಲದೇ ಎಲ್ಲದರಲ್ಲಿಯೂ ಈತ ತಾಯಿಗೆ ತಕ್ಕ ಮಗ.
Advertisement
Advertisement
ಇಂಥಾ ವಕೀಲೆ ತನ್ನ ವೃತ್ತಿಯ ನಿಮಿತ್ತವಾಗಿಯೇ ದುಷ್ಟ, ಭ್ರಷ್ಟ ರಾಜಕಾರಣಿಯೋರ್ವನನ್ನ ಎದುರು ಹಾಕಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗುತ್ತೆ. ಆ ರಾಜಕಾರಣಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಿ ಬಿಡಬಲ್ಲ ಕಿರಾತಕ. ಆತನ ಮಗ ತಂದೆಯ ಅಧಿಕಾರದ ಅಮಲಿನಲ್ಲಿ ಬೇಡದ್ದನ್ನೇ ಮಾಡುತ್ತಾ ಸಮಾಜ ಕಂಟಕನಾಗಿರುತ್ತಾನೆ. ಸದಾ ಅಮ್ಮನ ರಕ್ಷಣೆಗೆ ನಿಲ್ಲುತ್ತಾ ದುಷ್ಟರನ್ನು ಬಗ್ಗು ಬಡಿಯುವ ಜಾಯಮಾನದ ಮೋಹನದಾಸ ಆ ರಾಜಕಾರಣಿ ಮತ್ತು ಮಗನ ವಿರುದ್ಧವೂ ಸೆಣಸಬೇಕಾಗಿ ಬರುತ್ತದೆ. ಈ ನ್ಯಾಯ ಪಥದ ಹೋರಾಟದಲ್ಲಿ ತಾಯಿ ಮತ್ತು ಮಗ ಗೆಲ್ಲುತ್ತಾರಾ? ಅವರ ಕಥೆ ಏನಾಗುತ್ತೆ ಎಂಬುದೇ ಅಸಲಿ ಕುತೂಹಲ.
Advertisement
Advertisement
ಈ ಕಥಾ ಎಳೆ ತುಸು ಗಂಭೀರವಾಗಿ ಕಾಣಿಸೋದರಲ್ಲಿ ಅಚ್ಚರಿಯೇನಿಲ್ಲ. ಆದರೆ ಅದನ್ನು ಎಲ್ಲಿಯೂ ಹಾಗನ್ನಿಸದಂತೆ ನಿರ್ದೇಶಕ ಶಶಾಂಕ್ ಕಟ್ಟಿ ಕೊಟ್ಟಿದ್ದಾರೆ. ಸಾಧು ಕೋಕಿಲಾ ಸಮರ್ಥವಾಗಿ ನಗಿಸುತ್ತಾರೆ. ಭಜರಂಗಿ ಲೋಕಿ ಖಳನಾಗಿ ವಿಜೃಂಭಿಸಿದರೆ ಆತನ ಎದುರಿಗೆ ಅಜೇಯ್ ರಾವ್ ಅಕ್ಷರಶಃ ಅಬ್ಬರಿಸಿದ್ದಾರೆ. ಈ ಮೂಲಕವೇ ಅವರು ಆಕ್ಷನ್ ಹೀರೋ ಆಗಿ ನೆಲೆ ನಿಲ್ಲುವ ಸೂಚನೆಯನ್ನೂ ನೀಡುತ್ತಾರೆ. ಸುಮಲತಾ ಅವರದ್ದೂ ಕೂಡಾ ನೆನಪಲ್ಲುಳಿಯುವಂಥಾ ನಟನೆ. ಇದೆಲ್ಲದಕ್ಕೆ ಹಾಡು ಮತ್ತು ಹಿನ್ನೆಲೆ ಸಂಗೀತಗಳೂ ಸಾಥ್ ನೀಡಿವೆ.
ಹಾಗಂತ ಇಡೀ ಚಿತ್ರದಲ್ಲಿ ಯಾವ ಕೊರತೆಯೂ ಇಲ್ಲ ಅನ್ನುವಂತಿಲ್ಲ. ಆದರೆ ಶಶಾಂಕ್ ಇಲ್ಲಿ ಅನುಸರಿಸಿರೋ ಮನೋರಂಜನೆಯ ಕಮರ್ಷಿಯಲ್ ಮಾರ್ಗ ಅಂಥಾ ಕುಂದು ಕೊರತೆಗಳನ್ನು ದೊಡ್ಡದಾಗಿ ಕಾಡದಂತೆ ಮಾಡುವಲ್ಲಿ ಯಶ ಕಂಡಿದೆ. ಈ ಮೂಲಕ ತಾಯಿಗೆ ತಕ್ಕ ಮಗ ಪ್ರೇಕ್ಷಕರನ್ನು ನಿರೀಕ್ಷೆಯಂತೆಯೇ ಹಿಡಿದಿಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews