ಬೆಂಗಳೂರು: ಸಶಸ್ತ್ರ ಪಡೆಗಳ ಸಿಬ್ಬಂದಿ ಅನೇಕ ಕ್ಷೇತ್ರಗಳಲ್ಲಿ ನುರಿತ ಮತ್ತು ಅನುಭವಿಯಾಗಿದ್ದಾರೆ, ನಿವೃತ್ತಿಯ ನಂತರ ಅವರ ಅನುಭವಗಳ ಬಳಕೆಯು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅಭಿಪ್ರಾಯಪಟ್ಟರು.
ರಾಜಭವನದ ಗಾಜಿನಮನೆಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ವೀರ ಯೋಧರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದ ಅವರು, ದೇಶದ ಸ್ವಯಂಸೇವಾ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಮಾಜಿ ಸೈನಿಕರನ್ನು (Soldier) ಅರ್ಹ ಕೆಲಸಗಳಿಗೆ ನಿಯುಕ್ತಿಗೊಳಿಸಿಕೊಳ್ಳಬೇಕು ಎಂದರು.
Advertisement
Advertisement
ಸಶಸ್ತ್ರ ಪಡೆಗಳ ಧ್ವಜ ದಿನವು ನಮ್ಮ ರಕ್ಷಣೆ ಮತ್ತು ಭದ್ರತೆಗಾಗಿ ಯಾವಾಗಲೂ ಸಿದ್ಧವಾಗಿರುವ ಅದಮ್ಯ, ಧೈರ್ಯಶಾಲಿ, ಪರಾಕ್ರಮಿ, ಕೆಚ್ಚೆದೆಯ ಸೈನಿಕರಿಗೆ ಗೌರವವನ್ನು ಸಲ್ಲಿಸುವ ದಿನವಾಗಿದೆ. ಭಾರತೀಯ ಸೇನೆಯು ಭವ್ಯ ಇತಿಹಾಸವನ್ನು ಹೊಂದಿದೆ ಮತ್ತು ನಮ್ಮ ಸೈನ್ಯವು ವಿಶ್ವದ ಅತ್ಯುತ್ತಮ ಸೈನ್ಯವೆಂದು ಎಲ್ಲರಿಗೂ ತಿಳಿದಿದೆ. ನಮ್ಮ ಸೈನಿಕರು ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷವಾದ ಗುರುತನ್ನು ಮೂಡಿಸಿದ್ದಾರೆ ಎಂದು ಹೇಳಿದರು.
Advertisement
ನಮ್ಮ ಸಶಸ್ತ್ರ ಪಡೆಗಳು ಯುದ್ಧಗಳ ಸಮಯದಲ್ಲಿ ದೇಶದ ಗಡಿಗಳನ್ನು ರಕ್ಷಿಸಿದ್ದರೆ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಅವರು ದೇಶವಾಸಿಗಳಿಗೆ ಸಹಾಯ ಮತ್ತು ಪರಿಹಾರವನ್ನು ಒದಗಿಸಿದ್ದಾರೆ. ದೇಶದ ಹೆಮ್ಮೆ, ಏಕತೆ-ಸಮಗ್ರತೆ, ಸಾರ್ವಭೌಮತ್ವ ಕಾಪಾಡುವ ಭರದಲ್ಲಿ ಅದೆಷ್ಟೋ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅನೇಕ ಸೈನಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ದೈಹಿಕವಾಗಿ ಅಂಗವಿಕಲರಾಗಿದ್ದಾರೆ. ಅವರ ಕುಟುಂಬಗಳ ಕಲ್ಯಾಣ ಮತ್ತು ಪುನರ್ವಸತಿ ಕಲ್ಪಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
Advertisement
ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಯುದ್ಧದಲ್ಲಿ ಬಲಿಯಾದವರ ಮತ್ತು ಸರ್ವೋಚ್ಛ ತ್ಯಾಗ ಮಾಡಿದ ಸೈನಿಕರ ಮುಂದಿನ ಬಂಧುಗಳ ಕಲ್ಯಾಣ ಮತ್ತು ಪುನರ್ವಸತಿಗೆ ವಿಶೇಷ ಗಮನ ನೀಡಿವೆ. ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗಾಗಿ ವಿವಿಧ ಯೋಜನೆಗಳನ್ನು ಮಾಜಿ ಸೈನಿಕರ ಕಲ್ಯಾಣ ಇಲಾಖೆ, ರಕ್ಷಣಾ ಸಚಿವಾಲಯ, ಭಾರತ ಸರ್ಕಾರ ಮತ್ತು ರಾಜ್ಯ ಸೈನಿಕ ಮಂಡಳಿ ಮತ್ತು ಜಿಲ್ಲಾ ಸೈನಿಕ ಮಂಡಳಿಯಿಂದ ಜಾರಿಗೊಳಿಸಲಾಗುತ್ತಿದೆ ಎಂದರು.
ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಜೀವನ ಬೆಂಬಲ ಸಾಧನಗಳನ್ನು ಒದಗಿಸಲು ಭಾರತ ಸರ್ಕಾರದಿಂದ ರಾಷ್ಟ್ರೀಯ ವಯೋಶ್ರೀ ಯೋಜನೆ ಮತ್ತು ಎಡಿಐಪಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ದೈಹಿಕವಾಗಿ ಅಂಗವಿಕಲರಾದ ವೀರ ಸೈನಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಇದಕ್ಕೆ ಎಲ್ಲರ ಸಹಭಾಗಿತ್ವದ ಅಗತ್ಯವಿದೆ. ಪ್ರತಿಯೊಬ್ಬರೂ ಅವರ ಕಲ್ಯಾಣ ಯೋಜನೆಯನ್ನು ಅರ್ಥಮಾಡಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಹಾಗೂ ಸೇನೆಯ ಸಬಲೀಕರಣ ಮತ್ತು ಆಧುನೀಕರಣಕ್ಕೆ ಬದ್ಧವಾಗಿದೆ. ಇಂದು ಸೇನೆಯು ಆಧುನಿಕ ತಂತ್ರಜ್ಞಾನ, ಆಧುನಿಕ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಪ್ರಧಾನ ಮಂತ್ರಿಗಳು ಸೇನೆಯ ವೀರ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಹಬ್ಬದ ಸಮಯದಲ್ಲಿ ಎಲ್ಲರೂ ಕುಟುಂಬ ಸಮೇತ ತಮ್ಮ ಮನೆಗಳಲ್ಲಿ ಆಚರಿಸುತ್ತಾರೆ. ಆದರೆ ಸೇನೆಯ ಧೀರರು ಈ ಸಮಯದಲ್ಲೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಮನೋಸ್ಥೈರ್ಯ ಮತ್ತು ಉತ್ಸಾಹವನ್ನು ಹೆಚ್ಚಿಸಲು ನಮ್ಮ ಪ್ರಧಾನಿಗಳು ಪ್ರತಿವರ್ಷ ಸೈನಿಕರ ನಡುವೆ ಹೋಗಿ ಅವರೊಂದಿಗೆ ದೀಪಾವಳಿ ಆಚರಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಖುಷಿ ಪಡುವೆ: ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಈ ವರ್ಷದ ಧ್ವಜ ದಿನಾಚರಣೆಯ ಧ್ವಜಗಳನ್ನು ಬಿಡುಗಡೆಗೊಳಿಸಿದರು. ನಂತರ ಧ್ವಜ ನಿಧಿ ಸಂಗ್ರಹಿಸಿದ ವಿವಿಧ ಜಿಲ್ಲೆ ಮತ್ತು ಸಂಸ್ಥೆಗಳಿಗೆ ಪೋತ್ಸಾಹ ಪಾರಿತೋಷಕವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಮೇಜರ್ ಜನರಲ್ ಪಾಲ್ ದೀಪಕ್ ನಾಯ್ಡು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿವೃತ್ತ ನಿರ್ದೇಶಕರಾದ ಬ್ರಿಗೇಡಿಯರ್ ಎಂ.ಬಿ. ಶಶಿಧರ್ ಇತರರಿದ್ದರು. ಇದನ್ನೂ ಓದಿ: ಕಾಫಿನಾಡಲ್ಲಿ ಮನೆ-ಮನೆಗೆ ತೆರಳಿ ಸಿ.ಟಿ.ರವಿ ಭಿಕ್ಷಾಟನೆ