ಫ್ಲೋರಿಡಾ: ಯುವತಿಯೊಬ್ಬಳು ಮರಕ್ಕೆ ಕಟ್ಟಿದ ಹಗ್ಗದಲ್ಲಿ ಉಯ್ಯಾಲೆ ಆಡುತ್ತಾ ಮೊಸಳೆ ಇದ್ದ ನೀರಿಗೆ ಜಿಗಿಯುವ ಮೈನವಿರೇಳಿಸೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಫ್ಲೋರಿಡಾದ ಎವರ್ ಗ್ಲೇಡ್ಸ್ ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. 9 ಅಡಿ ಉದ್ದದ ಮೊಸಳೆ ನದಿಯಲ್ಲಿ ಇದೆ ಅಂತ ಗೊತ್ತಿದ್ದರೂ ಆ ಹುಡುಗಿ ಯಾವುದೇ ಭಯವಿಲ್ಲದೆ ಅದರ ಪಕ್ಕದಲ್ಲೇ ಜಿಗಿದಿದ್ದಾಳೆ.
ವಿಡಿಯೋದ ಆರಂಭದಲ್ಲಿ ಕುಟುಂಬವೊಂದು ನದಿ ದಡದಲ್ಲಿ ಆಟವಾಡ್ತಿರೋದನ್ನ ಕಾಣಬಹುದು. ಹುಡುಗಿಯೊಬ್ಬಳು ನೀರಿನಲ್ಲಿ ಮೊಸಳೆಯ ಹಿಂದೆಯೇ ಆಟವಾಡ್ತಿದ್ದು, ಇತ್ತ ಆಕೆಯ ತಂದೆ ಎನ್ನಲಾದ ವ್ಯಕ್ತಿ ತನ್ನ ಕಾಲಿನ ಬೆರಳುಗಳನ್ನ ಮೊಸಳೆಗೆ ಹತ್ತಿರದಲ್ಲೇ ಇಟ್ಟಿದ್ದಾರೆ. ಅತ್ತ ಮತ್ತೊಬ್ಬ ಹುಡುಗಿ ತಾನು ನೀರೊಳಗೆ ಜಿಗಿಯುತ್ತಿದ್ದೇನೆ ಎಂದು ತನ್ನ ತಂದೆಗೆ ಕೂಗಿ ಹೇಳಿ ಜಿಗಿದಿದ್ದಾಳೆ. ಈ ವೇಳೆ ಆಕೆ ಜಿಗಿದ ಸ್ಥಳಕ್ಕಿಂತ ಕೆಲವೇ ಇಂಚುಗಳ ಅಂತರದಲ್ಲಿ ಮೊಸಳೆ ಇದ್ದರೂ ಆಕೆಗೆ ಏನೂ ಮಾಡ್ಲಿಲ್ಲ.
ಮೊಸಳೆ ತುಂಬಾ ಹತ್ತಿರದಲ್ಲಿತ್ತು ಅಂತ ಆಕೆಯ ತಂದೆ ಕೂಲಾಗಿ ಹೇಳೋದನ್ನ ಕೇಳಬಹುದು. ಹುಡುಗಿ ಕೂಡ ಮತ್ತೆ ಈಜಿಕೊಂಡು ದಡ ಸೇರಿದ್ದಾಳೆ. ಈ ವಿಡಿಯೋವನ್ನ 2017ರ ಜುಲೈನಲ್ಲಿ ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಮತ್ತೆ ಹಂಚಿಕೊಂಡ ಬಳಿಕ ಚರ್ಚೆ ಶುರುವಾಗಿದೆ.
ಆ ಮೊಸಳೆ ವೆಜಿಟೇರಿಯನ್ ಇರಬೇಕು ಮಾಂಸ ತಿನ್ನಲ್ವೇನೋ ಅಂತ ವಿಡಿಯೋ ನೋಡಿದವರೊಬ್ಬರು ಕಮೆಂಟ್ ಮಾಡಿದ್ದಾರೆ. ಆದ್ರೆ ಇನ್ನೂ ಕೆಲವರು ಪೋಷಕರು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನ ನಾನು ಟಿವಿಯಲ್ಲಿ ನೋಡಿದ್ದೆ. ಈ ಮೊಸಳೆ ಸಾಕುಪ್ರಾಣಿಯಾಗಿದ್ದು, ಮಕ್ಕಳು ಅದರೊಂದಿಗೆಯೇ ಬೆಳೆದಿವೆ. ಅವು ದಾಳಿ ಮಾಡುವುದಿಲ್ಲ ಅಂತೇನಿಲ್ಲ. ಆದ್ರೆ ಇವರು ಈ ರೀತಿಯ ಸಾಹಸ ಮಾಡ್ತಿರೋದು ಇದೇ ಮೊದಲೇನಲ್ಲ ಅಂತ ಟ್ರಾವಿಸ್ ವಿಲಿಯಮ್ಸ್ ಎಂಬವರು ಹೇಳಿದ್ದಾರೆ.
https://www.youtube.com/watch?v=lYw8huDC4C4