ದಳಪತಿ ವಿಜಯ್ (Thalapathy Vijay) ಬಣ್ಣದ ಲೋಕದಿಂದ ಸಂಪೂರ್ಣವಾಗಿ ದೂರವಾಗಲಿದ್ದಾರಾ? ಇನ್ನೊಂದೇ ಒಂದು ಸಿನಿಮಾ. ಫಿನಿಶ್…ಅದನ್ನು ಮುಗಿಸಿದ ತಕ್ಷಣ ರಾಜಕೀಯದ (Politics) ಮೊಗಸಾಲೆಗೆ ಹೆಜ್ಜೆ ಇಡಲಿದ್ದಾರಾ? ಸದ್ಯಕ್ಕೆ ತಮಿಳುನಾಡಿನಲ್ಲಿ ರಜನಿಕಾಂತ್‌ಗಿಂತ ಒಂದು ಅಡಿ ಮುಂದಿರುವ ವಿಜಯ್ ಇಂಥ ತೀರ್ಮಾನ ಕೈಗೊಂಡಿದ್ದಾರಾ? ತಮಿಳುನಾಡಿನ ರಾಜಕೀಯ ರಂಗದಲ್ಲಿ ಹೀಗ್ಯಾಕೆ ಚರ್ಚೆ ನಡೆಯುತ್ತಿದೆ? ಏನಿದೆ ದಳಪತಿ ಮನಸಿನಲ್ಲಿ? ರಾಜಕೀಯ ರಂಗೇರಿದ ಕಥನ ಇಲ್ಲಿದೆ.
Advertisement
ನಿಜಕ್ಕೂ ಈ ಸುದ್ದಿಯನ್ನು ಕೇಳಿ ಇಡೀ ವಿಜಯ್ ಅಭಿಮಾನಿ ಬಳಗ ಕಂಗಾಲಾಗಿದೆ. ಸುಮಾರು ಇಪ್ಪತ್ತೊಂಬತ್ತು ವರ್ಷಗಳಿಂದ ಕಾಲಿವುಡ್‌ನಲ್ಲಿ ಮೆರೆಯುತ್ತಿರುವ ಹೀರೊ, ರಜನಿಕಾಂತ್ ನಂತರ ಬಂದರೂ ಅವರಷ್ಟೇ ಭಕ್ತಗಣವನ್ನು ಹೊಂದಿದ ನಾಯಕ, ಹೆಚ್ಚು ಕಮ್ಮಿ ನೂರೈವತ್ತು ಕೋಟಿ ಸಂಭಾವನೆ ಪಡೆಯುವ ದಳಪತಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಇತಿಹಾಸ, ಸಮಾಜಸೇವೆಯಲ್ಲೂ ಒಂದು ಕೈ ಮುಂದಿರುವ ಮಾನವತಾವಾದಿ…ಇಷ್ಟೆಲ್ಲ ಇದ್ದರೂ ಅದನ್ನೇ ಪಕ್ಕಕ್ಕೆ ತಳ್ಳಿ…ತಮಿಳುನಾಡಿನ ವಿಧಾನಸಭೆ ಪ್ರವೇಶಿಸಲು ಸಕಲ ಸಿದ್ಧತೆ ನಡೆಸಿದ್ದಾರಂತೆ ವಿಜಯ್ ನಿಜವಾ ಸುಳ್ಳಾ ?
Advertisement
Advertisement
ಇದು ಇಂದು ನಿನ್ನೆಯ ತೀರ್ಮಾನ ಅಲ್ಲ ಎನ್ನುವುದು ಅವರ ಆಪ್ತರ ಮಾತು. ಜಯಲಲಿತಾ ಹಾಗೂ ಕರುಣಾನಿಧಿ ಮರಣದ ನಂತರ ತಮಿಳುನಾಡು ರಾಜಕೀಯ ರಂಗ ಭಣ ಭಣ ಎನ್ನುತ್ತಿದೆ. ಆ ಇಬ್ಬರೂ ಸಿನಿಮಾ ಮಂದಿ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಅವರ ಭ್ರಷ್ಠಾಚಾರ ಇತ್ಯಾದಿಗಳನ್ನು ಜನರು ಗಮನಿಸಲಿಲ್ಲ. ಅಥವಾ ಗೊತ್ತಿದ್ದರೂ ಅದೇನು ಬಿಡು, ನಮಗೆ ಒಳ್ಳೆಯದನ್ನು ಮಾಡುತ್ತಾರಲ್ಲ…ಸಾಕು…ಇದೇ ಗುಂಗಿನಲ್ಲಿದ್ದರು. ಹೀಗಾಗಿಯೇ ಒಮ್ಮೆ ಕರುಣಾನಿಧಿ…ಇನ್ನೊಮ್ಮೆ ಜಯಲಲಿತಾ ಮುಖ್ಯಮಂತ್ರಿ ಗದ್ದುಗೆಯಲ್ಲಿ ವಿರಾಜಮಾನರಾದರು. ಇಬ್ಬರೂ ಈಗಿಲ್ಲ. ರಜನಿಕಾಂತ್ ಇನ್ನೇನು ಖಾದಿ ತೊಡಲು ಬಟ್ಟೆ ಐರನ್ ಮಾಡಿಕೊಂಡಿದ್ದರು. ದೇವರು ಅನಾರೋಗ್ಯಕ್ಕೆ ತಳ್ಳಿ ಬಿಟ್ಟ.
Advertisement
ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ. ಇದನ್ನು ಕಳೆದ ಇಪ್ಪತ್ತು ವರ್ಷಗಳಿಂದ ಕೇಳುತ್ತಲೇ ಬಂದಿದ್ದರು ಫ್ಯಾನ್ಸು.ದೇವರು ಮನಸು ಮಾಡಿದಾಗ ರಾಜಕೀಯಕ್ಕೆ ಬರುತ್ತೇನೆ ಇದನ್ನೇ ರಿಪೀಟ್ ಮಾಡುತ್ತಿದ್ದರು ತಲೈವಾ. ಕೊನೆಗೂ ರಾಜಕೀಯಕ್ಕೆ ಬರಲು ಸಿದ್ಧರಾದರು. ಪಕ್ಷ ಕಟ್ಟಿದರು. ಜಯಲಲಿತಾ- ಕರುಣಾನಿಧಿ ಬಿಟ್ಟ ಜಾಗದಲ್ಲಿ ಕೂಡಲು ಅಖಾಡಕ್ಕೆ ಇಳಿದಿದ್ದರು. ಅನಾರೋಗ್ಯ ಹುಡುಕಿಕೊಂಡು ಬಂದಿತು. ವೈದ್ಯರ ಸಲಹೆ ಮೇರೆಗೆ ಮತ್ತೆ ಬಣ್ಣದ ಲೋಕಕ್ಕೆ ಮರಳಿದರು. ಜನರು ದಿಕ್ಕೆಟ್ಟು ಹೋದರು. ರಜನಿ ಇಲ್ಲದ ಮೇಲೆ ಇನ್ಯಾರು ನಮ್ಮನ್ನು ಕಾಪಾಡೋರು ? ಆಗ ಎದ್ದು ನಿಂತರು ದಳಪತಿ ವಿಜಯ್.
ಕಳೆದ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಹೆಚ್ಚೆಚ್ಚು ಕಾಣಿಸಿಕೊಳ್ಳತೊಡಗಿದರು ವಿಜಯ್. ಕೂಲಿಕಾರ್ಮಿಕರು, ಸ್ತ್ರೀಯರು, ಮಧ್ಯಮ ವರ್ಗ, ವಿದ್ಯಾರ್ಥಿಗಳು…ಹೀಗೆ ಒಂದೊಂದು ವರ್ಗದವರ ಕಷ್ಟ ಸುಖ ನೋಡಿಕೊಳ್ಳಲು ಒಂದೊಂದು ಗುಂಪನ್ನು ನೇಮಿಸಿದರು. ಜನ ಸಂಪರ್ಕಕ್ಕೆ ಹೆಚ್ಚು ಕಾಳಜಿ ತೋರಿಸಿದರು. ಮೊನ್ನೆ ಮೊನ್ನೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ಇದೆಲ್ಲ ವಿಧಾನಸಭೆ ಎಂಟ್ರಿಗೆ ಪರೋಕ್ಷವಾಗಿ ಮುನ್ನುಡಿ ಬರೆಯುತ್ತಿತ್ತು. ಇದೀಗ ಬಂದ ಸುದ್ದಿ ಪ್ರಕಾರ ವಿಜಯ್ ಇನ್ನೊಂದೇ ಒಂದು ಚಿತ್ರದಲ್ಲಿ ನಟಿಸಿ ಬಣ್ಣದಲೋಕದಿಂದ ಸಂಪೂರ್ಣವಾಗಿ ದೂರವಾಗಲಿದ್ದಾರೆ. ಹಾಗಂತ ತಮಿಳುನಾಡಿನಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ನಿಜವಾ? ವಿಜಯ್ ಹೇಳುತ್ತಾರೆ ಒಂದು ದಿನ.
ಸದ್ಯಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದು ಮುಗಿದ ಮೇಲೆ ವೆಂಕಟ್ ಪ್ರಭು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅದೇ ಕೊನೆ. ಆಮೇಲೆ ಅವರ ಎಲ್ಲ ಕಣ್ಣು ಮುಂಬರುವ ಚುನಾವಣೆಯತ್ತ ದಿಟ್ಟಿಸಲಿದೆ. ಅದಕ್ಕೆ ಹೆಚ್ಚು ಸಮಯವೂ ಇಲ್ಲ. ಹೀಗನ್ನುವಷ್ಟರಲ್ಲಿ ಎಲೆಕ್ಷನ್ ಹಾಜರಾಗಲಿದೆ. ಅದಕ್ಕಾಗಿ ಸಮಯ ನೀಡಲೇಬೇಕು. ಊರೂರು ಸುತ್ತಬೇಕು. ಜನರನ್ನು ಮೆಚ್ಚಿಸಬೇಕು. ಈಗಾಗಲೇ ಬಿಜೆಪಿ ಆಮಂತ್ರಣ ಕೂಡ ನೀಡಿದೆ. ಆದರೆ ಅದನ್ನು ವಿಜಯ್ ಒಪ್ಪಿಕೊಳ್ಳುವುದು ಅನುಮಾನ. ಏನಾದರಾಗಲಿ ತಮಿಳುನಾಡು ರಾಜಕೀಯ ಪಡಸಾಲೆಯಲ್ಲಿ ಪಟಾಕಿ ಸಿಡಿಯಲಿದೆ ಏನಾಗುತ್ತದೋ ವಿಜಯ್ ಭವಿಷ್ಯ? ಎಲ್ಲದ್ದಕ್ಕೂ ಕಾಯಬೇಕಿದೆ.