ಬ್ಯಾಂಕಾಕ್: ಚಿನ್ನ ಕಳ್ಳತನ ಮಾಡಿದ್ದಕ್ಕಾಗಿ ಮಹಿಳೆಗೆ 235 ವರ್ಷ ಜೈಲು ಶಿಕ್ಷೆ ವಿಧಿಸಿರುವ ಘಟನೆ ಥೈಲ್ಯಾಂಡ್‌ನ (Thailand) ಖೋನ್ ಕೇನ್ ಪ್ರದೇಶದಲ್ಲಿ ನಡೆದಿದೆ.
ಮಹಿಳೆಯನ್ನು ಸೋಮ್ಜಿತ್ ಖುಮ್ದುವಾಂಗ್ ಎಂದು ಗುರುತಿಸಲಾಗಿದ್ದು, ಥೈಲ್ಯಾಂಡ್‌ನ ಈಶಾನ್ಯ ಭಾಗದಲ್ಲಿರುವ ಖೋನ್ ಕೇನ್ ಪ್ರದೇಶದಲ್ಲಿ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.ಇದನ್ನೂ ಓದಿ: ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್
ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಈ ಬಗ್ಗೆ ಅಂಗಡಿ ಮಾಲೀಕನಿಗೆ ಅನುಮಾನ ಬಂದಿತ್ತು. ಇದರಿಂದ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ, ಒಂದು ಎರಡು ಬಾರಿ ಅಲ್ಲ, ಒಟ್ಟು ಇಲ್ಲಿಯವರೆಗೂ 47 ಬಾರಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಜೊತೆಗೆ 2021 ರಿಂದಲೇ ಮಹಿಳೆ ಚಿನ್ನಾಭರಣಗಳನ್ನು ಕದಿಯಲು ಪ್ರಾರಂಭಿಸಿರುವುದು ಕಂಡುಬಂದಿದೆ.
ತಿಂಗಳು ಹಿಂದೆ ಮಹಿಳೆ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಮಾಲೀಕರು ಶಂಕಿಸಿದ್ದರು. ಆ ಸಂದರ್ಭದಲ್ಲಿ ಆಕೆಯ ಬಟ್ಟೆಯಿಂದ ಚಿನ್ನದ ನೆಕ್ಲೇಸ್ ಒಂದು ಬಿದ್ದಿತ್ತು. ಇದನ್ನು ಪ್ರಶ್ನಿಸಿದಾಗ ಅದು ಆಕಸ್ಮಿಕವಾಗಿ ತನ್ನ ಜೇಬಿಗೆ ಬಿದ್ದಿರುವುದಾಗಿ ತಿಳಿಸಿದ್ದಾಳೆ.
ಪೊಲೀಸರ ಮಾಹಿತಿ ಪ್ರಕಾರ, ಇಲ್ಲಿಯವರೆಗೂ ಮಹಿಳೆ ಕದ್ದ ವಸ್ತುಗಳಿಂದ ಭೂಮಿಯನ್ನು ಖರೀದಿಸಿದ್ದಾಳೆ. ಜೊತೆಗೆ ಇತರ ಬೆಲೆಬಾಳುವ ವಸ್ತುಗಳನ್ನು ಖರೀದಿಸಿದ್ದಾಳೆ. ಹೊಸ ಬೈಕ್ ಮತ್ತು ಆಭರಣದ ಫೋಟೋವನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾಳೆ. 10 ವರ್ಷಗಳಿಂದ ಮಹಿಳೆ ಆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮಾಲೀಕರು ಆಕೆಗೆ ಕದ್ದ ವಸ್ತುಗಳನ್ನು ಹಿಂದಿರುಗಿಸುವುದಾಗಿ ಕೇಳಿದ್ದರು. ನೀನು ಹಿಂದಿರುಗಿಸಿದರೆ ನಾನು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಕೂಡ ಹೇಳಿದ್ದರು.
ಆಗ ಮಹಿಳೆ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮಾತ್ರ ಹಿಂದಿರುಗಿಸಿದ್ದಳು. ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ತನಿಖೆ ನಂತರ ಒಟ್ಟು 5 ಲಕ್ಷ ಪೌಂಡ್ (6 ಕೋಟಿ ರೂ. ಹೆಚ್ಚು) ಮೌಲ್ಯದ ವಸ್ತುಗಳನ್ನು ಕದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ವಿಚಾರಣೆ ನಡೆಸಿದ್ದ ಥೈಲ್ಯಾಂಡ್ ನ್ಯಾಯಾಲಯ ಆಕೆಗೆ 235 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಇದನ್ನೂ ಓದಿ: BBK 11: ಮಂಜು ನಂಬಿಕೆಗೆ ಅರ್ಹರಲ್ಲ: ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಕಿಡಿ