ಬ್ಯಾಂಕಾಕ್: ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಥೈಲ್ಯಾಂಡ್ (Thailand), ಕಾಂಬೋಡಿಯಾ (Cambodia) ಎರಡೂ ದೇಶಗಳೂ ಉಲ್ಲಂಘಿಸಿವೆ. ವಿವಾದಿತ ಗಡಿ ಪ್ರದೇಶದಲ್ಲಿ ಥೈಲ್ಯಾಂಡ್ ವೈಮಾನಿಕ ದಾಳಿ (Airstrike) ನಡೆಸಿದೆ ಎಂದು ಥಾಯ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಪ್ರಾಂತ್ಯದಲ್ಲಿ ನಡೆದ ಹೊಸ ಘರ್ಷಣೆಯಲ್ಲಿ ಒಬ್ಬ ಥಾಯ್ ಸೈನಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಥಾಯ್ ಸೇನೆ ಸ್ಪಷ್ಟಪಡಿಸಿದೆ. ಕಾಂಬೋಡಿಯಾದ ರಕ್ಷಣಾ ಸಚಿವಾಲಯವು ಇಂದು ಬೆಳಗ್ಗೆ ಥಾಯ್ ಪಡೆಗಳು ತನ್ನ ಎರಡು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದೆ.
ಕಳೆದ ಹಲವಾರು ದಿನಗಳಿಂದ ಥಾಯ್ ಪಡೆಗಳು ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸುತ್ತಿವೆ ಮತ್ತು ಕಾಂಬೋಡಿಯನ್ ಪಡೆಗಳು ಪ್ರತೀಕಾರ ತೀರಿಸಿಕೊಂಡಿಲ್ಲ ಎಂದು ಸಚಿವಾಲಯ ಹೇಳಿಕೊಂಡಿದೆ. 11ನೇ ಶತಮಾನದ ಪ್ರಿಯಾ ವಿಹಾರ್ ದೇವಾಲಯವು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಕಾರಣವಾಗಿದೆ.

