– ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ
– ಇಂದು ಅಥವಾ ನಾಳೆ ಸಿಎಂಗೆ ನಾಗೇಶ್ ವರದಿ ಸಲ್ಲಿಕೆ ಸಾಧ್ಯತೆ
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಇಂದು ಸಂಜೆ ಅಥವಾ ನಾಳೆ ಸಿಎಂಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ.
ಗುರುವಾರ ರಾತ್ರಿ ಗುಜರಾತ್‍ನಿಂದ ವಾಪಸ್ ಆಗಿರುವ ಸಚಿವರು, ಪಠ್ಯ ಪುಸ್ತಕ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆಯಿದೆ. ಈಗಾಗಲೇ ಪಠ್ಯಪುಸ್ತಕ ಗೊಂದಲದ ಬಗ್ಗೆ ಶಿಕ್ಷಣ ಇಲಾಖೆ ವರದಿ ಸಿದ್ಧ ಮಾಡಿದ್ದು, ಇದನ್ನು ನೋಡಿದ ಬಳಿಕ ಸಿಎಂಗೆ ಆ ವರದಿಯನ್ನು ಸಲ್ಲಿಸುತ್ತಾರೆ. ಸಾಹಿತಿಗಳ ಆರೋಪಕ್ಕೆ ಶಿಕ್ಷಣ ಇಲಾಖೆ ದಾಖಲಾತಿ ಸಮೇತ ವರದಿ ಸಿದ್ಧ ಮಾಡಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಏನಾಗಿದೆ? ಯಾವ ಪಠ್ಯ ಸೇರ್ಪಡೆ ಮಾಡಲಾಗಿದೆ? ಯಾವ ಪಠ್ಯ ಕೈಬಿಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ವರದಿಯಲ್ಲಿ ಉಲ್ಲೇಖ ಮಾಡಿದ್ದು, ಈಗ ಕೇಳಿ ಬಂದಿರುವ ಆರೋಪಗಳ ಬಗ್ಗೆ ದಾಖಲಾತಿ ಸಮೇತ ವಿವರಣೆ ನೀಡಲಿದೆ.
Advertisement
Advertisement
ಪರಿಷ್ಕರಣೆ ಸಮಿತಿ ಅಧ್ಯಕ್ಷರ ವಿವರ ಒಳಗೊಂಡು, ಟಿಪ್ಪು, ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ವಿವಾದಿತ ಪಠ್ಯಗಳ ಬಗ್ಗೆ ಸಂಪೂರ್ಣ ದಾಖಲಾತಿ ಸಮೇತ ವಿವರಣೆ ನೀಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ವರದಿಯಲ್ಲಿ ಏನಿದೆ?:
ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕನ್ನಡ ಕಾವ್ಯ, ಇತಿಹಾಸವನ್ನು ಅಳವಾಗಿ ಅಭ್ಯಾಸ ಮಾಡಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅವರು ಅರ್ಹರಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದೆ. ಇದರ ಜೊತೆಗೆ ನಾಡಿಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಮತ್ತು ಆರೋಪದ ವಿಚಾರವಾಗಿ 2017ರಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
Advertisement
ಕುವೆಂಪು ಪಠ್ಯದ ಬಗ್ಗೆ ಗೊಂದಲ ಬಗ್ಗೆ ದಾಖಲಾತಿ ಸಮೇತ ವಿವರ ನೀಡಿದ್ದು, 2015-16 ಡಾ. ಮುಡಂಬಡಿತ್ತಾಯ ಸಮಿತಿ ಕುವೆಂಪು ಅವರ 8 ಪಠ್ಯವನ್ನು ಇಟ್ಟಿದ್ದರು. ಆದರೆ ಬರಗೂರು ಸಮಿತಿ ಕುವೆಂಪು ಅವರು ಒಂದು ಪಠ್ಯ ಕಡಿತ ಮಾಡಿ 7 ಪಠ್ಯ ಅಳವಡಿಕೆ ಮಾಡಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಹೊಸದಾಗಿ ಮತ್ತೆ ಕುವೆಂಪು ಅವರ 3 ಪಠ್ಯ ಸೇರ್ಪಡೆ ಮಾಡಿದೆ ಎಂಬುದರ ಬಗ್ಗೆ ಪಠ್ಯದ ಸಮೇತ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
4ನೇ ತರಗತಿಯಲ್ಲಿ ಪರಿಸರ ಅಧ್ಯಯನದಲ್ಲಿ ಕುವೆಂಪುರಿಗೆ ಅಪಮಾನ ಮಾಡಿದೆ ಎಂಬ ಆರೋಪ ಮಾಡಲಾಗಿದೆ. ಆದರೆ ರೋಹಿತ್ ಸಮಿತಿ 6ರಿಂದ 10ನೇ ತರಗತಿ ಪಠ್ಯ ಮಾತ್ರ ಪರಿಷ್ಕರಣೆ ಮಾಡಿದೆ. 4ನೇ ತರಗತಿ ಪಠ್ಯ ಬರಗೂರು ರಾಮಚಂದ್ರಪ್ಪ ಸಮಿತಿಯದ್ದೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಮೈಸೂರು ಒಡೆಯರ್ ಪಠ್ಯಕ್ಕೆ ಬರಗೂರು ಸಮಿತಿ ಕತ್ತರಿ ಹಾಕಿತ್ತು. ಈಗ ಅದನ್ನು ಸರಿ ಮಾಡಲಾಗಿದೆ. ಮೈಸೂರು ಒಡೆಯರ್ ಪೂರ್ಣ ಇತಿಹಾಸ ಅಳವಡಿಕೆ ಮಾಡಲಾಗಿದೆ.
ಬರಗೂರು ಸಮಿತಿಯೂ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಒಡೆಯರ್ ಪಠ್ಯವನ್ನು ಸಂಕ್ಷಿಪ್ತ ಮಾಡಿ ಟಿಪ್ಪು ಪಠ್ಯವನ್ನು ಹೆಚ್ಚಾಗಿ ಸೇರ್ಪಡೆ ಮಾಡಿತ್ತು. ಈಗ ಇದನ್ನು ಸರಿ ಮಾಡಲಾಗಿದೆ. ಅದರ ಜೊತೆಗೆ ಬರಗೂರು ಸಮಿತಿಯೂ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಲಾಗಿತ್ತು. ಅದನ್ನು ಪರಿಷ್ಕರಣೆ ಮಾಡಿ ಟಿಪ್ಪುವಿನ ಇತಿಹಾಸ ಸಂಪೂರ್ಣವಾಗಿ ಸೇರ್ಪಡೆ ಮಾಡಲಾಗಿದೆ. ಆದರೆ ಟಿಪ್ಪು ಪಠ್ಯವನ್ನು ಕೈಬಿಟ್ಟಿದ್ದಾರೆ ಅನ್ನೋದು ಶುದ್ಧ ಸುಳ್ಳಾಗಿದೆ.
ರೋಹಿತ್ ಚಕ್ರತೀರ್ಥ ಸಮಿತಿಯೂ ಎಲ್ಲಾ ಪಠ್ಯವನ್ನು ಪರಿಷ್ಕರಣೆ ಮಾಡಿಲ್ಲ. 1 ರಿಂದ 10 ಕನ್ನಡ ಭಾಷಾ ಪುಸ್ತಕ ಮತ್ತು 6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಮಾತ್ರ ಪರಿಷ್ಕರಣೆ ಮಾಡಿದೆ. ಈಗಾಗಲೇ 76.87% ಪಠ್ಯ ಮುದ್ರಣ ಆಗಿದೆ. ಇದರಲ್ಲಿ 63.01% ಪಠ್ಯ ಶಾಲೆಗಳಿಗೆ ಸರಬರಾಜು ಆಗಿದೆ. ಬರಗೂರು ಸಮಿತಿ ಪರಿಷ್ಕರಣೆಯಲ್ಲಿ ಹೆಚ್ಚು ಲೋಪಗಳು ಇದ್ದವು. ಇದನ್ನು ಸರಿ ಮಾಡಲಾಗಿದೆ. ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್ ಭಾಗವತ್
ಹೊಸ ಧರ್ಮಗಳ ಉದಯ ಪಠ್ಯದಲ್ಲಿ ವೈದಿಕ ಧರ್ಮ ಹಾಗೂ ಬ್ರಾಹ್ಮಣರನ್ನು ನಿಂದಿಸಲಾಗಿತ್ತು. ಇಂದ್ರ ದೇವನು ವಿಪರೀತ ಸೋಮ ರಸ ಕುಡಿಯುತ್ತಿದ್ದನು ಅಂತ ಸೇರಿಸಲಾಗಿತ್ತು. ಅಷ್ಟೇ ಅಲ್ಲದೇ 1857 ಸ್ವಾತಂತ್ರ್ಯ ಸಂಗ್ರಾಮವನ್ನ ದಂಗೆ ಅಂತ ಕರೆಯಲಾಗಿತ್ತು. ಹಿಂದೂ ಮಹಾಸಾಗರವನ್ನ ಹಿಂದು ಅಂತ ಹೆಸರು ಇತ್ತು ಅಂತ ಇಂಡಿಯನ್ ಓಷನ್ ಅಂತ ಬದಲಾವಣೆ ಮಾಡಲಾಗಿತ್ತು. ಇದನ್ನ ಪರಿಷ್ಕರಣೆ ಮಾಡಿದ್ದೇವೆ.
ಬರಗೂರು ಸಮಿತಿಯು 6ನೇ ತರಗತಿಯಲ್ಲಿ ಇತಿಹಾಸ ಪರಿಚಯ ಪಾಠ ಸೇರಿಸಿತ್ತು. ಇದು 6ನೇ ತರಗತಿ ವಯೋಮಾನದ ಮಕ್ಕಳಿಗೆ ಮೀರಿದ ಪಠ್ಯ ಆಗಿತ್ತು. ಇದರಲ್ಲಿ ಪಾಶ್ಚಾತ್ಯ ಇತಿಹಾಸಕಾರರ ಬಗ್ಗೆ ಮಾತ್ರ ಉಲ್ಲೇಖ ಇತ್ತು. ಈಗ ಅದನ್ನು ಬಿಟ್ಟು ಭಾರತ ನಮ್ಮ ಹೆಮ್ಮೆ ಎಂಬ ಪಾಠ ಸೇರ್ಪಡೆ ಮಾಡಲಾಗಿದೆ.
ಟಿಪ್ಪು, ತುಘಲಕ್, ಮೊಘಲ್ ದೊರೆಗಳ ಬಗ್ಗೆ ಪುಟಗಟ್ಟಲೆ ಉಲ್ಲೇಖ ಬರಗೂರು ಸಮಿತಿ ಮಾಡಿತ್ತು. ಭಾರತೀಯ ರಾಜರ ಸಾಹಸ, ಶೌರ್ಯದ ಪಠ್ಯ ಇರಲಿಲ್ಲ. ಇದನ್ನು ಸರಿ ಮಾಡಲಾಗಿದೆ. ಟಿಪ್ಪುವಿನ ವೈಭವೀಕರಣಕ್ಕೆ ಕಡಿವಾಣ ಹಾಕಲಾಗಿದೆ. ಟಿಪ್ಪು ಬಗ್ಗೆ ಸತ್ಯದ ಮಾಹಿತಿ ನೀಡಲಾಗಿದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಮದಕರಿ ನಾಯಕರ ಪಠ್ಯ ಇರಲಿಲ್ಲ. ಸಮಿತಿ ಈಗ ಅವರ ಪಠ್ಯ ಸೇರ್ಪಡೆ ಮಾಡಿದೆ. ಬರಗೂರು ಸಮಿತಿ 10ನೇ ತರಗತಿ ಪಠ್ಯದಲ್ಲಿ ಅಂಬೇಡ್ಕರ್, ಗಾಂಧಿಯವರ ಕುರಿತು ಮಾಹಿತಿ ಹೊಂದಿದ ಉದಾತ್ತ ಚಿಂತನೆಗಳು ಪಾಠ ತೆಗೆಯಲಾಗಿತ್ತು. ಈಗ ಅದನ್ನು ಮರು ಸೇರ್ಪಡೆ ಮಾಡಲಾಗಿದೆ.
ಭಗತ್ ಸಿಂಗ್, ನಾರಾಯಣ ಗುರು, ಪೆರಿಯಾರ್ ಪಠ್ಯವನ್ನು ಹೊಸ ಸಮಿತಿ ಕೈಬಿಟ್ಟಿಲ್ಲ. ಸುಮ್ಮನೆ ವಿವಾದ ಮಾಡಿದ್ದಾರೆ. ಭಗತ್ ಸಿಂಗ್‍ರ ಒಂದು ಹೆಚ್ಚುವರಿ ಪಠ್ಯ ತಾಯಿ ಭಾರತೀಯ ಅಮರ ಯೋಧರು ಎನ್ನುವ ಪಠ್ಯ ಸೇರ್ಪಡೆ ಮಾಡಲಾಗಿದೆ. ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದೇವೆ.
ಬರಗೂರು ಸಮಿತಿ 8ನೇ ತರಗತಿಯಲ್ಲಿ ಸಿಂಧೂ ಸಂಸ್ಕೃತಿ ಪಾಠ ತೆಗೆದು ನೆಹರು ಅವರ ಪತ್ರಗಳ ಪಾಠ ಸೇರಿಸಿದ್ದರು. ಹೊಸ ಸಮಿತಿಯೂ ಸಿಂಧೂ ಸಂಸ್ಕೃತಿಯ ನಾಗರೀಕತೆ ಪಠ್ಯ ಸೇರ್ಪಡೆ ಮಾಡಿದೆ. ಬರಗೂರು ಸಮಿತಿ ಚರ್ಚ್, ಮಸೀದಿಗಳ ಫೋಟೋವನ್ನು ಪಠ್ಯದಲ್ಲಿ ಬಳಸಿ ದೇವಾಲಯ ಫೋಟೋವನ್ನು ಕೈಬಿಟ್ಟಿತ್ತು. ಇದನ್ನ ಈಗ ಸರಿ ಮಾಡಲಾಗಿದೆ.
ಮೊಘಲರ ದಾಳಿ ತಡೆದ ಭಾರತೀಯ ಅಹೋಮ್ ರಾಜಯ ಪರಿಚಯ ಮಾಡಿಕೊಡಲಾಗಿದೆ. ಕಾಶ್ಮೀರದ ಕಾರ್ಕೋಟ ರಾಜರ ಪಠ್ಯ ಸೇರ್ಪಡೆ ಮಾಡಲಾಗಿದೆ. ಮೈಸೂರಿನ ಲ್ಯಾನ್ಸರ್ ರೆಜಿಮೆಂಟ್ ಕುರಿತು ಮಾಹಿತಿ ಸೇರಿಸಲಾಗಿದೆ. ಭಾರತದ ನಾಗಬುಡಕಟ್ಟು ಮಹಿಳೆಯ ಸಾಹಸ ಕಥೆ ಗಾಯಿಡಿನ್ ಲೂ ಅವರ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್
ಕ್ರೈಸ್ತ, ಇಸ್ಲಾಂ, ಜೈನ, ಮತಗಳ ಬಗ್ಗೆ ಉಲ್ಲೇಖ ಇತ್ತು. ಆದರೆ ಸನಾತನ ಧರ್ಮದ ಪಠ್ಯ ಇರಲಿಲ್ಲ. ಈಗ ಸನಾತನ ಧರ್ಮದ ಪಠ್ಯ ಸೇರ್ಪಡೆ ಮಾಡಲಾಗಿದೆ. ಕೇರಳ ರಾಜ ಮಾರ್ತಾಂಡ ವರ್ಮನ ವಿವರ ನೀಡಲಾಗಿದೆ. ತಮಿಳುನಾಡಿನ ವೀರ ಪಾಂಡೆ ಕಟ್ಟಾ ಬೊಮ್ಮರವರ ಮಾಹಿತಿ ಕನ್ನಡದಲ್ಲಿ ಸೇರ್ಪಡೆ ಮಾಡಲಾಗಿದೆ.
ಸಮಾಜ ವಿಜ್ಞಾನ ಹೊರ ಇಳಿಸಲು 6 ಮತ್ತು 7ನೇ ತರಗತಿಯಲ್ಲಿ 1 ಅಧ್ಯಾಯ, 8ನೇ ತರಗತಿಯಲ್ಲಿ 2 ಅಧ್ಯಾಯ, 9ನೇ ತರಗತಿಯಲ್ಲಿ 4 ಮತ್ತು 10ನೇ ತರಗತಿಯಲ್ಲಿ 4 ಅಧ್ಯಾಯ ಕೈಬಿಟ್ಟು ಪಠ್ಯದ ಹೊರೆ ಇಳಿಸಲಾಗಿದೆ. ವಿವೇಕಾನಂದರ ಜನ್ಮದಿನ ಕುರಿತು ಪಠ್ಯ ಸೇರ್ಪಡೆ ಮಾಡಲಾಗಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದ ಬಗ್ಗೆ ಮಾಹಿತಿ ನೀಡಲಾಗಿದೆ.
ಚನ್ನಭೈರಾದೇವಿ, ನಿಟ್ಟೂರು ಶ್ರೀನಿವಾಸರಾಯರು, ಕೆ.ಟಿ.ಗಟ್ಟಿಯವರ ಪಾಠ ಸೇರ್ಪಡೆ ಮಾಡಲಾಗಿದೆ. ಬರಗೂರು ಸಮಿತಿ ಏಣಗಿ ಬಾಳಪ್ಪ ಜೀವನ ಪರಿಚಯ ಕೈಬಿಟ್ಟಿತ್ತು. ಕೆ.ಎಸ್. ನರಸಿಂಹಸ್ವಾಮಿಯವರ ಭಾರತೀಯತೆ ಕವನ ಕೈ ಬಿಡಲಾಗಿತ್ತು. ಅದನ್ನ ಸೇರ್ಪಡೆ ಮಾಡಲಾಗಿದೆ. ಇದರ ಜೊತೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಬರಗೂರು ಸಮಿತಿ ಕೈ ಬಿಟ್ಟಿತ್ತು ಜೊತೆಗೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಮಾಹಿತಿಯನ್ನು ತೆಗೆದಿತ್ತು. ಹೊಸ ಸಮಿತಿ ಕೆಂಪೇಗೌಡರ ಪಠ್ಯ ಸೇರ್ಪಡೆ ಮಾಡಿದೆ.
ಹುಬ್ಬಳ್ಳಿಯ ಸಿದ್ದರೂಢ ಜಾತ್ರೆ, ಮಂಜೇಶ್ವರ ಗೋವಿಂದ್ ಪೈ, ಪಂಜೆ ಮಂಗೇಶರಾಯರು ಪಠ್ಯ ಸೇರ್ಪಡೆ ಮಾಡಲಾಗಿದೆ. ಬಸವಣ್ಣನವರ ಪಠ್ಯವನ್ನು ರೋಹಿತ್ ಸಮಿತಿ ಪರಿಷ್ಕರಣೆ ಮಾಡಿಲ್ಲ. 2015-16ರಲ್ಲಿ ಡಾ. ಮುಡಂಬಡಿತ್ತಾಯ ಸಮಿತಿ ನೀಡಿದ್ದ ಪಠ್ಯವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ.
ಬರಗೂರು ಸಮಿತಿ ಪರಿಷ್ಕರಣೆ ವಿವಾದ ಆಗಿದ್ದರಿಂದ ಬರಗೂರು ಸಮಿತಿ ಪರಿಷ್ಕರಣೆ ಕೈಬಿಡಲಾಗಿದೆ. ಚಿಂತಕ ಹೆಡ್ಗೆವಾರ್ ಅವರ ಭಾಷಣದ ಒಂದು ಭಾಗವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಆರ್‍ಎಸ್‍ಎಸ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೇವಲ ರಾಷ್ಟ್ರೀಯ ಭಾವನೆಯ ಪಠ್ಯ ಇದಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ 107 ಪಾಠಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
ಕನ್ನಡ ಪ್ರಥಮ ಭಾಷೆಯಲ್ಲಿ 2021-22ರಲ್ಲಿ 195 ಪಾಠ ಇತ್ತು. 2022-23ರಲ್ಲಿ 198 ಪಠ್ಯ ಆಗಿದೆ. ಇದರಲ್ಲಿ 33 ಪಠ್ಯ ಮಾತ್ರ ಬದಲಾವಣೆ ಆಗಿದೆ. ಹೊಸದಾಗಿ 3 ಪಾಠ ಮಾತ್ರ ಸೇರಿಸಲಾಗಿದೆ. 165 ಪಾಠ ಹಾಗೇ ಉಳಿಸಿಕೊಳ್ಳಲಾಗಿದೆ. ಕನ್ನಡ ದ್ವೀತಿಯ ಭಾಷೆಯಲ್ಲಿ 170 ಪಾಠಗಳ ಪೈಕಿ 8 ಪಾಠ ಮಾತ್ರ ಬದಲಾವಣೆ ಮಾಡಲಾಗಿದೆ. 162 ಪಾಠ ಹಳೆ ಸಮಿತಿಯದ್ದೇ ಉಳಿಸಿಕೊಳ್ಳಲಾಗಿದೆ ಎಂಬ ಸಂಪೂರ್ಣ ದಾಖಲಾತಿಗಳ ಸಮೇತ ಇಲಾಖೆ ವರದಿ ಸಿದ್ಧ ಮಾಡಿದೆ.