ಮೈಸೂರು: ಪಠ್ಯ ಪರಿಷ್ಕರಣೆ ವಿಚಾರವಾಗಿ ದಿನಕ್ಕೊಂದು ವಿವಾದ ಭುಗಿಲೇಳುತ್ತಿದ್ದು, ರಾಜ್ಯ ಸರ್ಕಾರ ತೀವ್ರ ಒತ್ತಡ ಎದುರಿಸುತ್ತಿರುವಂತೆ ಕಾಣುತ್ತಿದೆ. ಅದ್ರಲ್ಲೂ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಲೆದಂಡಕ್ಕೆ ದಿನೇ ದಿನೇ ಆಗ್ರಹ ಹೆಚ್ಚುತ್ತಿದೆ. ದೇವನೂರ ಮಹಾದೇವ ಸೇರಿದಂತೆ 6 ಮಂದಿ ಸಾಹಿತಿಗಳು ಪಠ್ಯವಾಪ್ಸಿ ಚಳವಳಿ ಆರಂಭಿಸಿದ್ದಾರೆ.
ಬೆಂಗಳೂರು, ಚಾಮರಾಜನಗರ, ಬಾಗಲಕೋಟೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ರಾಷ್ಟ್ರಕವಿ ಕುವೆಂಪುರನ್ನು ಅಪಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಆದಿಚುಂಚನಗಿರಿ ಶ್ರೀಗಳ ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ
Advertisement
Advertisement
ಈಗಾಗಲೇ ತಮ್ಮ ಪಠ್ಯವನ್ನು ಹಿಂಪಡೆಯುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದ ಹಿರಿಯ ಸಾಹಿತಿ ದೇವನೂರ ಮಹಾದೇವ ಶಿಕ್ಷಣ ಸಚಿವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ತಮ್ಮ ಪಠ್ಯವನ್ನು ಹಿಂಪಡೆದಿರುವುದಾಗಿ ಹೇಳಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರೂ ಲೆಕ್ಕಿಸದೇ ಇರುವುದು ನನಗೆ ದಬ್ಬಾಳಿಕೆ ಅನ್ನಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: BBMP ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ: ಬೊಮ್ಮಾಯಿ
Advertisement
ಪತ್ರದಲ್ಲಿ ಏನಿದೆ?
ಈ ಹಿಂದೆ 10ನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈ ಬಿಡಬೇಕೆಂದು ತಮಗೆ ವಿನಂತಿಸಿ ಮೇ 26ರಂದು ಪತ್ರ ಬರೆದು ಕೊರಿಯರ್ ಮುಖಾಂತರ ರವಾನಿಸಿದ್ದೆ. ಅದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಬರೆದು ಕೊರಿಯರ್ ಮಾಡಿದ್ದೆ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೇ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು.
Advertisement
ಮತ್ತೂ ಹೇಳಬೇಕೆಂದರೆ, ಚಾತುವರ್ಣ ವಿರೋಧಿ ಬಸವಣ್ಣನವರ ಪಾಠವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕತ್ತು ಹಿಸುಕಿರುವುದು, ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿಸಿರುವುದು, ಒಂದು ಒಕ್ಕೂಟ ಸರ್ಕಾರದಲ್ಲಿ ಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜವೂ ಬೇಕು ಎಂದು ದನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಮಕ್ಕಳ ಪಠ್ಯ ಪರಿಷ್ಕರಣೆ ಮಾಡಲು ಅಧ್ಯಕ್ಷನನ್ನಾಗಿಸಿರುವುದು ಮತ್ತು ಸಮರ್ಥಿಸುತ್ತಿರುವುದು ಅಸಮಾಧಾನ ತಂದಿದೆ.
ಭಿನ್ನಾಭಿಪ್ರಾಯಗಳನ್ನು ಟೂಲ್‌ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲು ಕಸ ಮಾಡಿ, ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ.
ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ – ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು ಎಂದು ಕೋರಿದ್ದಾರೆ.