ಗರಿಗೆದರಿದ ಕ್ರಿಕೆಟ್ ರಣರಂಗ- ಟೀಂ ಇಂಡಿಯಾ ಆಟಗಾರರಿಗೆ 2 ವಾರ ಕ್ವಾರಂಟೈನ್

Public TV
2 Min Read
Team India

ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದ ಟೀಂ ಇಂಡಿಯಾ ಆಟಗಾರರು ಮೈದಾನಕ್ಕೆ ಇಳಿದು ನೆಟ್ ಅಭ್ಯಾಸಕ್ಕೆ ಮುಂದಾಗಲಿದ್ದಾರೆ. ಹೀಗಾಗಿ ಅವರು ಎರಡು ವಾರ ಕ್ವಾರಂಟೈನ್‍ನಲ್ಲಿ ಇರಲಿದ್ದಾರೆ.

ಈ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಎರಡು ವಾರಗಳ ಕಡ್ಡಾಯ ಕ್ವಾರಂಟೈನ್‍ಗೊಳಗಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ, ನೆಟ್ ಪ್ರಾಕ್ಟೀಸ್, ಇಂಡೋರ್ ಅಭ್ಯಾಸಕ್ಕೆ ಸೌಲಭ್ಯವುಳ್ಳ ಹೋಟೆಲ್ ಒಂದರಲ್ಲಿ ಭಾರತೀಯ ಕ್ರಿಕೆಟಿಗರು ಎರಡು ವಾರಗಳ ಕಾಲ ಕ್ವಾರಂಟೈನ್‍ನಲ್ಲಿರಲಿದ್ದಾರೆ.

bcci 1

ಯಾವುದೇ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದಾದರೆ ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಲೇ ಬೇಕಿದೆ. ಏಕೆಂದರೆ ಐಸಿಸಿ ಟಿ20 ವಿಶ್ವಕಪ್ ಆಸೀಸ್ ನೆಲದಲ್ಲಿ ನಡೆಯಲಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಈ ನಿಮಯ ಜಾರಿಗೆ ತರಲಾಗಿದೆ. ಹೀಗಾಗಿ ನಿಯಮದ ಪ್ರಕಾರ ಟೀಂ ಇಂಡಿಯಾ ಕಡ್ಡಾಯವಾಗಿ ಎರಡು ವಾರ ಕ್ವಾರಂಟೈನ್‍ಗೆ ಒಳಪಡಲಿದೆ. ಈ ಮೂಲಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಬಹುನಿರೀಕ್ಷಿತ ಟೆಸ್ಟ್ ಸರಣಿಯನ್ನು ಆಡಲು ಸಿದ್ಧತೆ ನಡೆಸಿದೆ ಎಂದು ತೋರುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್, “ಕೊರೊನಾ ಸೃಷ್ಟಿಸಿದ ಆತಂಕದಿಂದಾಗಿ ನಮ್ಮಲ್ಲಿ ಈಗ ಯಾವುದೇ ಆಯ್ಕೆ ಇಲ್ಲ. ಪ್ರತಿಯೊಬ್ಬರೂ ಕ್ವಾರಂಟೈನ್‍ಗೆ ಒಳಪಡುವುದು ಮುಖ್ಯವಾಗಿದೆ. ಏಕೆಂದರೆ ಇಷ್ಟು ದೀರ್ಘಾವಧಿಯವರೆಗೆ ಸೋಂಕಿನಿಂದ ದೂರವಿದ್ದು, ವಿದೇಶಕ್ಕೆ ಹೋಗಿ ಎರಡು ವಾರಗಳ ಕಾಲ ಕ್ವಾರಂಟೈನ್‍ಗೆ ಒಳಗಾಗುವುದು ಸೂಕ್ತವಲ್ಲ. ಕ್ವಾರಂಟೈನ್‍ನಲ್ಲಿ ಯಾವ ಮಾನದಂಡಗಳಿವೆ ಎಂಬುದನ್ನು ನಾವು ನೋಡಬೇಕಾಗಿದೆ” ಎಂದು ತಿಳಿಸಿದ್ದಾರೆ.

team india test main 2

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೂ ಎರಡು ವಾರಗಳ ಅವಧಿಗೆ ಟೀಂ ಇಂಡಿಯಾವನ್ನು ಹೋಟೆಲ್‍ನಲ್ಲಿ ಲಾಕ್ ಮಾಡಬಹುದು. ಇತ್ತ ಐಷಾರಾಮಿ ಹೋಟೆಲ್‍ಗಳು ಸೆಪ್ಟೆಂಬರ್ ನಲ್ಲಿ ತೆರೆಯುವ ಸಾಧ್ಯತೆ ಇದ್ದು, ಅಲ್ಲಿಯೇ ಎಲ್ಲಾ ತರಬೇತಿ ಸೌಲಭ್ಯ ಮತ್ತು ನೆಟ್ ವ್ಯವಸ್ಥೆಯನ್ನು ಬಿಸಿಸಿಐ ಮಾಡಿಕೊಡಲಿದೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳು ಪ್ರಾರಂಭವಾಗುವ ಮೊದಲು ಭಾರತೀಯ ಆಟಗಾರರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಅವಕಾಶ ನೀಡುವಂತೆ ಪಂದ್ಯವನ್ನು ಸಹ ಆಯೋಜಿಸಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ.

Team India Test

ಜಗತ್ತಿನಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರದಿದ್ದರೆ ಪ್ರವಾಸಗಳನ್ನು ಬಿಸಿಸಿಐ ಮುಂದೂಡುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ ನಡುವೆ ನಿಗಧಿಯಾಗಿರುವ ಟಿ20 ವಿಶ್ವಕಪ್ ಕೂಡ ಕೊರೊನಾ ಆತಂಕದ ಮೇಲೆ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *