– ದಾಳಿಯಲ್ಲಿ ಉಗ್ರ ಹಾಶಿಮ್ ಮೂಸಾ ಪಾತ್ರ ಬಿಚ್ಚಿಟ್ಟ ಗುಪ್ತಚರ ಇಲಾಖೆ
ಶ್ರೀನಗರ: ಕಳೆದ ವರ್ಷ ಕಾಶ್ಮೀರದ ಗಂಡರ್‌ಬಲ್ ಜಿಲ್ಲೆಯ ಸೋನಾಮಾರ್ಗ್‌ನ Z-Morh ಸುರಂಗ ಯೋಜನೆಯ ಬಳಿ ಆರು ಕಾರ್ಮಿಕರು ಮತ್ತು ಒಬ್ಬ ವೈದ್ಯರನ್ನು ಹತ್ಯೆಗೈದಿದ್ದ ಉಗ್ರರ ಘಟಕವೇ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದೆ ಎಂದು ವರದಿಯಾಗಿದೆ.
ಎರಡೂ ದಾಳಿಗಳನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಬೆಂಬಲಿತ ಉಗ್ರರ ಘಟಕವೇ ನಡೆಸಿದೆ. ಪಹಲ್ಗಾಮ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಹಲವಾರು ಉಗ್ರರು ಈ ಹಿಂದೆ Z-Morh ದಾಳಿಯಲ್ಲಿ ಭಾಗವಹಿಸಿದ್ದರು. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಲಷ್ಕರ್ ಭಯೋತ್ಪಾದಕ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ Z-Morh ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಗುಪ್ತಚರ ಇಲಾಖೆ ಈಗ ದೃಢಪಡಿಸಿದೆ. ಇದನ್ನೂ ಓದಿ: ಐಎಸ್ಐ ಮುಖ್ಯಸ್ಥನನ್ನು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಿದ ಪಾಕ್
2024 ರ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಜುನೈದ್ ಅಹ್ಮದ್ ಭಟ್ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾಗಿದ್ದ. ನಂತರ ಅದೇ ಗುಂಪಿನ ಇಬ್ಬರು ಸಹಚರರನ್ನು ಹೊಡೆದುರುಳಿಸಲಾಗಿತ್ತು.
ಏನಿದು ಸೋನಾಮಾರ್ಗ್ ಸುರಂಗ ದಾಳಿ?
ಅ.2024 ರಲ್ಲಿ ಸೋನಾಮಾರ್ಗ್ ಸುರಂಗ ಎಂದು ಕರೆಯಲ್ಪಡುವ Z-Morh ಸುರಂಗದಲ್ಲಿ ಭಯೋತ್ಪಾದಕರು ಖಾಸಗಿ ಕಂಪನಿಯ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಆರು ಕಾರ್ಮಿಕರು ಮತ್ತು ವೈದ್ಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದರು. ಭಯೋತ್ಪಾದಕರು ಕಂಪನಿಯ ಎರಡು ವಾಹನಗಳನ್ನು ಸುಟ್ಟುಹಾಕಿದ್ದರು ಮತ್ತು INSAS ರೈಫಲ್‌ನ್ನು ಸ್ಥಳದಲ್ಲಿಯೇ ಎಸೆದು ಹೋಗಿದ್ದರು.
6.5 ಕಿಲೋಮೀಟರ್ ಇರುವ ಈ ಸುರಂಗವು ಶ್ರೀನಗರವನ್ನು ಕಾರ್ಗಿಲ್‌ಗೆ ಸಂಪರ್ಕಿಸುತ್ತದೆ. ಈ ಸುರಂಗ ವರ್ಷಪೂರ್ತಿ ಸಂಪರ್ಕವನ್ನು ಕಲ್ಪಿಸುತ್ತದೆ.
ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಕರ್ನಾಟಕ ಮೂಲದ ಇಬ್ಬರು ಸಾವಿಗೀಡಾಗಿದ್ದರು. ಇದನ್ನೂ ಓದಿ: ಅಫ್ಘಾನ್‍ನಿಂದ ಭಾರತಕ್ಕೆ ಸರಕು ಸಾಗಾಟ – ಪಾಕ್‍ನಿಂದ ಅನುಮತಿ