ಬೆಂಗಳೂರು/ಬಾಗಲಕೋಟೆ: ಉಗ್ರರು ನಿಮ್ಮ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿದ್ರೆ ಏನ್ ಮಾಡ್ತೀರಿ ಎಂದು ಪ್ರಶ್ನಿಸುವ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ (RB Thimmapur) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಹಿಂದೂ (Hindu) ಧರ್ಮದ ಹೆಸರಿನಲ್ಲಿ ಗುಂಡಿಟ್ಟು ಕೊಂದಿಲ್ಲ, ಇದೆಲ್ಲ ರಾಜಕೀಯ ಎಂದಿದ್ದ ತಿಮ್ಮಾಪುರ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿಮಗೆ ಮಂಜುನಾಥ ಹಾಗೂ ಭರತ್ ಕುಟುಂಬದ ಮುಂದೆ ಹೋಗಿ ನಿಂತು ಹೇಳುವುದಕ್ಕೆ ಧೈರ್ಯ ಇದೆಯಾ ಎಂದು ಕೇಳಿದರು.
ತಿಮ್ಮಾಪುರ್ ಅವರ ಚಡ್ಡಿ ಬಿಚ್ಚಿ ಚೆಕ್ ಮಾಡಬೇಕಿತ್ತು. ಈ ರೀತಿ ಹೇಳಿಕೆ ನೀಡಿದ ನೀವು ಸಾರ್ವಜನಿಕ ಜೀವನದಲ್ಲಿ ಇರಬೇಡಿ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಇರಿ ಎಂದು ಹೇಳಿದರು.
ಹಿಂದೂ ಪುರುಷರನ್ನು ಗುರುತಿಸಿ ಅವರ ಹೆಂಡತಿ ಮಕ್ಕಳ ಮುಂದೆ ಕೊಲೆ ಮಾಡಿದ್ದಾರೆ. ಅವರು ಕೊಂದಿದ್ದು ಪ್ರವಾಸಿಗರಲ್ಲ, ತಾವು ಹಿಂದೂ ಎಂದಿದಕ್ಕೆ ಮಾತ್ರವೇ ಅವರನ್ನು ಕೊಂದಿದ್ದಾರೆ. ಇದು ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ದಾಳಿ ಅಂತ ಓವೈಸಿ ಒಪ್ಪಿದ್ದಾರೆ. ಬೇಸರದ ಸಂಗತಿ ಏನೆಂದರೆ ಕಾಂಗ್ರೆಸ್ ಒಪ್ಪಲು ತಯಾರಿಲ್ಲ ಎಂದರು.
ಎಂಥ ದರಿದ್ರ ಪರಿಸ್ಥಿತಿಗೆ ಈ ಸರ್ಕಾರ ಇಳಿದಿದೆ ಎಂದರೆ ಈ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಹಣ ಘೋಷಣೆ ಮಾಡಿದೆ. ಕನಿಷ್ಠ ಮಾನವೀಯತೆ ಇದ್ದರೆ 1 ಕೋಟಿ ರೂ. ಕೊಡಬೇಕಿತ್ತು. ಪಕ್ಕದ ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಈ ಸರ್ಕಾರ 15 ಲಕ್ಷ ಹಣ ನೀಡಿದೆ. ಅದಕ್ಕೆ ಸರಿ ಸಮಾನವಾಗಿ ಆದರೂ ಹಣ ಕೊಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 20 ಲಕ್ಷ ರೂಪಾಯಿ ಒಗ್ಗೂಡಿಸುವ ಕೆಲಸ ಮಾಡಿದ್ದೇನೆ. ನಾಳೆ ಅಥವಾ ನಾಡಿದ್ದು ಭರತ್ ಭೂಷಣ್ ಮನೆಗೆ 10 ಲಕ್ಷದ 1 ರೂ. ಹಾಗೂ ಮಧುಸೂದನ್ ರಾವ್ ಮನೆಗೆ 10 ಲಕ್ಷದ 1 ರೂ. ಕೊಡುತ್ತೇವೆ. ರಾಜ್ಯ ಸರ್ಕಾರ ಕೊಟ್ಟಿರುವ ಹಣಕ್ಕಿಂತ ಒಂದು ರೂಪಾಯಿ ಹೆಚ್ಚು ಹಣವನ್ನು ನಮ್ಮ ಕ್ಷೇತ್ರದಿಂದಲೇ ನೀಡುತ್ತೇವೆ ಎಂದು ಸಿಟ್ಟು ಹೊರ ಹಾಕಿದರು.