– ತುಂಗಾ ನದಿಯ ದಡದಲ್ಲಿ ಒಂದು ಬಾರಿ ಸ್ಫೋಟ
– ಸುದ್ದಿಗೋಷ್ಠಿ ನಡೆಸಿದ ಶಿವಮೊಗ್ಗ ಎಸ್‌ಪಿ
– 14 ಮೊಬೈಲ್, ರಿಲೆ ಸರ್ಕ್ಯೂಟ್, ವಯರ್‌ಗಳು, ಬ್ಯಾಟರಿಗಳು ಪತ್ತೆ
ಶಿವಮೊಗ್ಗ: ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದರೂ ನಿಜವಾಗಿಯೂ ಸ್ವತಂತ್ರ ಸಿಕ್ಕಿಲ್ಲ. ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಗಬೇಕಾದರೆ ಭಾರತ ಇಸ್ಲಾಮಿಕ್ ರಾಷ್ಟ್ರ ಆಗಬೇಕು. ಈ ಕಾರಣಕ್ಕೆ ಜಿಹಾದ್ ದಾಳಿಗೆ ಬಾಂಬ್ ತಯಾರಿಸಲು ಇಬ್ಬರು ಶಂಕಿತ ಉಗ್ರರು ಸಿದ್ಧತೆ ನಡೆಸುತ್ತಿದ್ದ ಆತಂಕಕಾರಿ ವಿಚಾರ ಶಿವಮೊಗ್ಗ(Shivamogga) ಪೊಲೀಸ್ ತನಿಖೆಯಿಂದ ಬಯಲಾಗಿದೆ.
Advertisement
ಮಾಝ್ ಮುನೀರ್ ಅಹಮದ್(Maaz Munir Ahmad) ಹಾಗೂ ಸೈಯದ್ ಯಾಸೀನ್(Syed Yasin) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್(Lakshmi Prasad) ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
Advertisement
Advertisement
ಇಬ್ಬರು ಐಸಿಸ್(ISIS) ವಿಡಿಯೋಗಳಿಂದ ಪ್ರೇರಿತರಾಗಿ ಭಾರತದಲ್ಲೂ ದಾಳಿ ನಡೆಸಲು ಸಿದ್ದತೆ ನಡೆಸುತ್ತಿದ್ದರು. ಮೊಬೈಲ್, ವಾಟ್ಸಪ್ ಮೂಲಕ ಸಂವಹನ ನಡೆಸದೇ ಟೆಲಿಗ್ರಾಮ್, ಸಿಗ್ನಲ್ ಇತ್ಯಾದಿ ಮೆಸೆಂಜರ್ ಆಪ್ ಬಳಸುತ್ತಿದ್ದ ವಿಚಾರ ತನಿಖೆಯಿಂದ ತಿಳಿದು ಬಂದಿದೆ.
Advertisement
ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್(21) ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಓದಿದ್ದು ಎರಡು ತಿಂಗಳ ಹಿಂದೆ ವ್ಯಾಸಂಗ ಮುಗಿಸಿದ್ದ. ಮಾಜ್ ಮುನೀರ್(22) ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದಾನೆ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್
ಬಂಧನ ಆಗಿದ್ದು ಹೇಗೆ?
ಆಗಸ್ಟ್ 15ರಂದು ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ಘರ್ಷಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬಟ್ಟೆ ಅಂಗಡಿ ನೌಕರ ಪ್ರೇಮ್‌ಸಿಂಗ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬೀಯುಲ್ಲಾನ ಬಂಧನವಾಗುತ್ತದೆ. ಆತನ ವಿಚಾರಣೆ ಮತ್ತು ಮೊಬೈಲ್ ದಾಖಲೆ ಪರಿಶೀಲನೆಯ ವೇಳೆ ಆತ ಹಲವರ ಜೊತೆ ಸಂವಹನ ನಡೆಸಿದ ವಿಚಾರ ತಿಳಿದು ಬರುತ್ತದೆ. ಈ ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಎ1 ಆರೋಪಿ ಪರಾರಿ:
ಈ ಪ್ರಕರಣದಲ್ಲಿ ಎ1 ಆಗಿರುವ ತೀರ್ಥಹಳ್ಳಿ ಮೂಲದ ಶಾರೀಕ್ (24) ಜಬೀಯುಲ್ಲಾ ಬಂಧನದ ಬಳಿಕ ಪರಾರಿಯಾಗಿದ್ದಾನೆ. ಆತನೇ ಸೂತ್ರಧಾರನಾಗಿದ್ದು, ಎರಡು ಮೊಬೈಲ್ ಬಳಕೆ ಮಾಡುತ್ತಿದ್ದ. ಈತನ ಬಂಧನವಾದರೆ ಮತ್ತಷ್ಟ ಮಾಹಿತಿ ಲಭ್ಯವಾಗಲಿದೆ. ಮುಂದೆ ಈಗ ಬಂಧನಕ್ಕೆ ಒಳಗಾದ ಆರೋಪಿಗಳ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಲಕ್ಷ್ಮಿಪ್ರಸಾದ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರ್ಟಿಕಲ್ 370 ರದ್ದು, ದಸರಾ ರಜೆ ಬಳಿಕ ವಿಚಾರಣೆ – ಸಿಜೆಐ
ಐಸಿಸ್ ಮಾಧ್ಯಮದ ಸದಸ್ಯರು:
ಯಾಸಿನ್ ಮತ್ತು ಮಾಜ್ ಮುನೀರ್ ಪಿಯುಸಿ ಸ್ನೇಹಿತರು. ಇವರ ಜೊತೆ ಶಾರೀಕ್ ಐಸಿಸ್ ಚಟುವಟಿಕೆಯ ಬಗ್ಗೆ ಮಾಹಿತಿ ಕಳುಹಿಸುತ್ತಿದ್ದ. ಆರೋಪಿಗಳ ಮೊಬೈಲ್‌ನಲ್ಲಿ ಬಾಂಬ್ ತಯಾರಿಸುವ ಪಿಡಿಎಫ್ ಫೈಲ್, ಐಸಿಸ್ ಉಗ್ರರು ತಲೆ ಕಡಿಯುವ ಮತ್ತು ಜೀವಂತವಾಗಿ ಸುಡುವ ವೀಡಿಯೋಗಳು ಲಭ್ಯವಾಗಿದೆ. ಇವರು ಐಸಿಸ್ ಜೊತೆ ನೇರವಾಗಿ ಸಂವಹನ ನಡೆಸಿಲ್ಲ. ಆದರೆ ಐಸಿಸ್ ಟೆಲಿಗ್ರಾಮ್ ಚಾನೆಲ್‌ನ ಸದಸ್ಯರಾಗಿದ್ದರು.
ಬಾಂಬ್ ತಯಾರಿ:
ಯಾಸಿನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರನಾಗಿದ್ದರೆ ಮಾಜ್ ಮುನೀರ್ ಮೆಕ್ಯಾನಿಕ್ ಓದಿದ್ದ. ಹೀಗಾಗಿ ಇವರು ಬಾಂಬ್ ತಯಾರಿಸಲು ಮುಂದಾಗುತ್ತಾರೆ. ಯಾಸಿನ್ ರಿಲೆ ಸರ್ಕ್ಯೂಟ್, ಟೈಮರ್ ಆನ್‌ಲೈನ್‌ನಲ್ಲಿ ಖರೀದಿಸಿದ್ದ. ಅಲ್ಯೂಮಿನಿಯಂ ಪೌಡರ್ ಸರ್ಚ್ ಮಾಡಿದ್ದ ಆದರೆ ಸಿಕ್ಕಿರಲಿಲ್ಲ. ಬ್ಯಾಟರಿ, ಸ್ವಿಚ್ ಜೊತೆ ಸ್ಥಳೀಯವಾಗಿ ಸಿಗುವ ಸ್ಫೋಟಕವನ್ನು ಖರೀದಿ ಮಾಡಿ ಆಗಸ್ಟ್ 15ರ ಬಳಿಕ ಗುರುಪುರ–ಪುರಲೆ ಸಮೀಪದ ಅಡಿಕೆ ತೋಟಗಳಿಂದ ಆವೃತವಾದ ತುಂಗಾ ನದಿಯ ದಂಡೆಯಲ್ಲಿ ಪರೀಕ್ಷೆ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟ ನಡೆದಿರಲಿಲ್ಲ. ಆದರೆ ಈ ಸ್ಫೋಟದ ವಿಡಿಯೋವನ್ನು ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿದೆ. ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಬ್ ಸ್ಫೋಟಿಸಲು ತಯಾರಿ ನಡೆಸುತ್ತಿದ್ದರು. ಭಾರತದ ರಾಷ್ಟ್ರ ಧ್ವಜವನ್ನು ಇವರು ಸುಟ್ಟಿದ್ದರು ಅದರ ವೀಡಿಯೋವನ್ನು ಇವರು ಚಿತ್ರೀಕರಿಸಿದ್ದರು.
ಖಾಫೀರ್ ಮೇಲೆ ದಾಳಿ:
ಇಸ್ಲಾಂ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹೀಗಾಗಿ ನಮ್ಮನ್ನು ವಿರೋಧಿಸುವ ಖಾಫೀರ್ ಮೇಲೆ ಜಿಹಾದ್ ಮಾಡಬೇಕು ಎಂಬ ಮನಸ್ಥಿತಿಯನ್ನು ಇವರು ಹೊಂದಿದ್ದಾರೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಕನಸು ಕಂಡಿದ್ದರು. ಬೆಂಗಳೂರು, ಬಾಂಬೆ, ಗೋವಾಗೆ ಮೂವರು ಹೋಗಿದ್ದರು. ಇವರು ಬಾಂಬ್ ಸ್ಫೋಟ ಮಾಡಲು ಯೋಜನೆ ರೂಪಿಸಲು ಹೋಗಿದ್ದರೋ ಅಥವಾ ಸುಮ್ಮನೆ ಹೋಗಿದ್ದರಾ ಎಂಬುದು ಪತ್ತೆಯಾಗಬೇಕಿದೆ. ಸೆರೆ ಸಿಕ್ಕ ಒಂದು ಪೆನ್‌ಡ್ರೈವ್‌ನಲ್ಲಿ ಮತಾಂಧತೆಯನ್ನು ಪ್ರಚೋದಿಸುವ ವೀಡಿಯೋ, ಪಠ್ಯಗಳು ಲಭ್ಯವಾಗಿದೆ.
ಏನು ಸಿಕ್ಕಿದೆ?
ದಾಳಿ ವೇಳೆ ಒಟ್ಟು 14 ಮೊಬೈಲ್, 1 ಡಾಂಗಲ್, 2 ಲ್ಯಾಪ್‍ಟಾಪ್, 1 ಪೆನ್ ಡ್ರೈವ್, ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಜಪ್ತಿ ಮಾಡಲಾಗಿದೆ. ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ಛಿದ್ರಗೊಂಡ ಬಾಂಬ್ ಅವಶೇಷಗಳು, ಬಾಂಬ್ ತಯಾರಿಸಲು ಬೇಕಾದ ಸಾಮಾಗ್ರಿಗಳು, ರಿಲೆ ಸರ್ಕ್ಯೂಟ್, ಬಲ್ಬ್‌ಗಳು, ವಯರ್‌ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು, ಅರ್ಧ ಸುಟ್ಟಿರುವ ರಾಷ್ಟ್ರಧ್ವಜ, ಶಾರೀಕ್ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ರಿಟ್ಜ್ ಕಾರನ್ನು ವಶಕ್ಕೆ ಪಡೆಯಲಾಗಿದೆ.