ಚಿಕ್ಕಮಗಳೂರು: ಶಾಶ್ವತ ಬರದ ತವರಲ್ಲಿ 12 ವರ್ಷಗಳ ಬಳಿಕ ಕೆರೆ ತುಂಬಿದ ಖುಷಿಗೆ ಗ್ರಾಮಸ್ಥರು ಅದ್ಧೂರಿ ಹಾಗೂ ಸುಂದರ ತೆಪ್ಪೋತ್ಸವ ಮಾಡಿ ಬಸವೇಶ್ವರ ಸ್ವಾಮಿಗೆ ಉಘೇ ಅಂದಿದ್ದಾರೆ.
ಕಡೂರು ತಾಲೂಕು ಸಿಂಗಟಗೆರೆ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಕೆರೆ 12 ವರ್ಷಗಳಿಂದ ತುಂಬಿರಲಿಲ್ಲ. 70 ವರ್ಷಗಳಿಂದ ತೆಪ್ಪೋತ್ಸವ ನಿಂತಿದರಿಂದ ಈ ತಲೆಮಾರಿನ ಜನ ಗ್ರಾಮದ ತೆಪ್ಪೋತ್ಸವವನ್ನೇ ಕಂಡಿರಲಿಲ್ಲ. 75 ವರ್ಷಗಳ ಅವಧಿಯಲ್ಲಿ ಹತ್ತಾರು ಬಾರಿ ಕೆರೆ ತುಂಬಿದ್ರು ಹಣದ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ತೆಪ್ಪೋತ್ಸವ ನಡೆದಿರಲಿಲ್ಲ. ಈ ವರ್ಷ ಕೆರೆ ತುಂಬಿದ ಪರಿಣಾಮ ವೃದ್ಧರು, ಯುವಕ-ಯುವತಿಯರೆಲ್ಲಾ ಸೇರಿ ತೆಪ್ಪೋತ್ಸವ ನಡೆಸಿದ್ದಾರೆ.
ಜಿಲ್ಲೆಯ ಕಡೂರು ತಾಲೂಕು ಶಾಶ್ವತ ಬರಗಾಲಕ್ಕೆ ತುತ್ತಾದ ಕ್ಷೇತ್ರ. ಕಡೂರು ತಾಲೂಕಿನ ಜನ-ಜಾನುವಾರಗಳಿಗೆ ಕುಡಿಯೋ ನೀರಿಗೂ ಹಾಹಾಕಾರವಿತ್ತು. ಎಷ್ಟು ಹಾಹಾಕಾರವಂದರೆ ಗುಡ್ಡಕ್ಕೆ ಮೇವಿಗೆ ಹೊಡೆದ ದನಕರುಗಳನ್ನ ಅಲ್ಲೆ ಬಿಟ್ಟು ಬರುವಷ್ಟು ಮತ್ತು ಹೋದ ಬೆಲೆಗೆ ಮಾರುವಷ್ಟು ಇವರನ್ನು ಬರಗಾಲ ಕಾಡುತ್ತಿತ್ತು. ಆದರೆ ಈ ವರ್ಷ ಮಳೆಯಿಂದ ಕೆರೆ ತುಂಬಿದ್ದು, ಹಳ್ಳಿಗರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅದೇ ಖುಷಿಯಲ್ಲಿ ಈ ವರ್ಷ ವಿಧ-ವಿಧದ ಹೂವುಗಳಿಂದ ಅಲಂಕಾರ ಮಾಡಿ ತೆಪ್ಪೋತ್ಸವ ನಡೆಸಿ ಖುಷಿ ಪಟ್ಟಿದ್ದಾರೆ.
ಹಾಸನ-ಚಿತ್ರದುರ್ಗ-ಚಿಕ್ಕಮಗಳೂರಿನ ಗಡಿಗ್ರಾಮವಾದ ಈ ಹಳ್ಳಿಯ ತೆಪ್ಪೋತ್ಸವದಲ್ಲಿ ಹೊಸದುರ್ಗ, ಕಡೂರು, ಅರಸೀಕೆರೆ ತಾಲೂಕಿನ ಹತ್ತಾರು ಹಳ್ಳಿಯ ಜನ ಒಗ್ಗೂಡಿ ತೆಪ್ಪೋತ್ಸವ ನಡೆಸಿದರು. ಜಾತ್ರೆಯಲ್ಲಿ ಐದು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.