ಮಂಡ್ಯ: ಕೆರಗೋಡು (Keragodu) ಹನುಮ ಧ್ವಜ (Hanuman Flag Clash) ಪ್ರಕರಣದಲ್ಲಿ ಕೆರಗೋಡು ಗ್ರಾಮ ಪಂಚಾಯತಿಯ ಪಿಡಿಓ ತಲೆದಂಡವಾಗಿದೆ. ಪಿಡಿಓ (PDO) ಜೀವನ್ ಬಿ.ಎಂ ಅವರನ್ನು ಐದು ಕಾರಣ ನೀಡಿ ಅಮಾನತು ಮಾಡಲಾಗಿದೆ.
ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ತನ್ವೀರ್ ಆಶೀಫ್ ಸೇಠ್ ಪಿಡಿಓ ಅವರನ್ನು ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ. ಗ್ರಾಪಂ ಸ್ವತ್ತನ್ನು ಖಾಸಗಿಯವರಿಗೆ ನೀಡುವುದಕ್ಕೆ ಸರ್ಕಾರದ ಅನುಮತಿ ಕಡ್ಡಾಯ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ ಖಾಸಗಿಯವರಿಗೆ ನೀಡಲಾಗಿದೆ. ಕೆರಗೋಡು ಗ್ರಾಮದಲ್ಲಿ ನಡೆದ ಸಂಘರ್ಷಕ್ಕೆ ಪಿಡಿಓ ನೇರ ಕಾರಣವಾಗಿದ್ದಾರೆ. ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವಿಗೆ ಆಕ್ರೋಶ- ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿಚಾರ್ಜ್
ಇಷ್ಟೇ ಅಲ್ಲದೇ ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿ, ಷರತ್ತು ಉಲ್ಲಂಘಿಸಿದ್ದರೂ ಕ್ರಮಕೈಗೊಳ್ಳದೆ ಪಿಡಿಓ ನಿರ್ಲಕ್ಷವಹಿಸಿದ್ದಾರೆ. ರಾಷ್ಟ್ರ ಧ್ವಜದ ಬದಲು ಹನುಮ ಧ್ವಜ ಹಾರಿಸಲು ಅವಕಾಶ ನೀಡಿರುವುದು ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣ ನೀಡಿ ಪಿಡಿಓ ಅವರನ್ನು ಅಮಾನತು ಮಾಡಿ ಆದೇಶ ಹೊಡಿಸಲಾಗಿದೆ.
ಕೆರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರು ರಾಷ್ಟ್ರ ಧ್ವಜ ಹಾರಿಸಲು ಅನುಮತಿ ಪಡೆದು, ಹನುಮ ಧ್ವಜ ಹಾರಿಸಿದ್ದರು. ಬಳಿಕ ಪೊಲೀಸರು ಪ್ರವೇಶಿಸಿ ಹನುಮ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ್ದರು. ಹನುಮ ಧ್ವಜ ಇಳಿಸಿದ ವಿಚಾರಕ್ಕೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದವು. ಇದನ್ನೂ ಓದಿ: ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ