ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ಇಂದು (ಏ.14) ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಆತ್ಮೀಯ ಗೆಳೆಯ ಟೆನ್ನಿಸ್ ಕೃಷ್ಣ (Tennis Krishna) ಹಾಗೂ ನಟಿ ಅಭಿನಯ (Abhinaya) ಸಂತಾಪ ಸೂಚಿಸಿದ್ದಾರೆ. ಅವರೊಂದಿಗಿನ ಒಡನಾಟದ ಬಗ್ಗೆ ಅವರು ಸ್ಮರಿಸಿದ್ದಾರೆ.
ಬ್ಯಾಂಕ್ ಜನಾರ್ಧನ್ ಅವರಿಗೆ ಬಹಳಷ್ಟು ವರ್ಷಗಳಿಂದ ಆರೋಗ್ಯ ಸಮಸ್ಯೆಯಿತ್ತು. ಈ ಹಿಂದೆ ಆದಿಚುಂಚನಗಿರಿ ಒಂದು ಕಾರ್ಯಕ್ರಮಕ್ಕೆ ಹೋಗುವಾಗ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ವೇದಿಕೆಗೆ ಹೋಗುವ ಮುಂಚೆ ಈ ಘಟನೆ ನಡೆದಿತ್ತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವು, ಅಂದು ಬೇಗನೇ ಟ್ರೀಟ್‌ಮೆಂಟ್ ಕೊಡಿಸಿದ್ದಕ್ಕೆ ಅವರು ಉಳಿದುಕೊಂಡಿದ್ದರು.
ಕಳೆದ ವರ್ಷವೂ ಅವರಿಗೆ ಮತ್ತೊಮ್ಮೆ ಹಾರ್ಟ್ ಅಟ್ಯಾಕ್ ಆಯ್ತು. ಇನ್ನೇನು ಚೇತರಿಸಿಕೊಳ್ಳುತ್ತಿದ್ದರು. ನಾನು ಅವರನ್ನು ಕಡೆಯದಾಗಿ ನೋಡಿದ್ದು, ಲೀಲಾವತಿ ಅವರು ನಿಧನರಾದ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ಜನಾರ್ಧನ್ ಬಂದಿದ್ದರು. ಅಲ್ಲಿ ನಾನು ಅವರನ್ನು ಕೊನೆಯದಾಗಿ ಭೇಟಿ ಮಾಡಿದ್ದು, ಎಂದಿದ್ದಾರೆ. ಈ ಸಾವಿನ ಸುದ್ದಿ ಕೇಳುವ ಮುನ್ನ ಅರ್ಧ ಗಂಟೆ ಮುಂಚೆ ಅವರನ್ನು ನೆನೆಸಿಕೊಂಡೆ ಎಂದು ಗೆಳೆಯನ ಬಗ್ಗೆ ನಟ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟ ಬ್ಯಾಂಕ್ ಜನಾರ್ಧನ್ ವಿಧಿವಶ – ನಿವಾಸದಲ್ಲೇ ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
ನಾವು ಸ್ನೇಹಿತರು ಅನ್ನೋದಕ್ಕಿಂತ ಅಣ್ಣ ತಮ್ಮಂದಿರಂತೆ ಇದ್ವಿ. ಅವರಿಗೆ ಹೀಗೆ ಆಗಿರೋದು ತುಂಬಾ ನೋವು ಆಗ್ತಿದೆ. ಈ ಚಿತ್ರರಂಗದಲ್ಲಿ ಹಿರಿಯ ಕಲಾವಿದರಿಗೆ ಅವಕಾಶಗಳನ್ನು ಕೊಡೋದು ಬಿಟ್ಟು ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾರೆ. ಹಿರಿಯ ಕಲಾವಿದರಲ್ಲಿ ಇಬ್ಬರಿಗಾದ್ರೂ ಅವಕಾಶ ಕೊಡಬೇಕು ಅಲ್ವಾ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ
ತುಂಬಾ ಒಳ್ಳೆಯ ಹಾಸ್ಯನಟನಾಗಿದ್ದರು. ಈ ಹಿಂದೆ ‘ಹಿಟ್ಲರ್ ಕಲ್ಯಾಣ’ ಎಂಬ ಸೀರಿಯಲ್‌ನಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಲವು ಸಿನಿಮಾಗಳಲ್ಲಿ ಅವರೊಟ್ಟಿಗೆ ತೆರೆಹಂಚಿಕೊಂಡಿದ್ದೇನೆ. ಪುಟ್ಟಿ ಪುಟ್ಟಿ ಅಂತ ಮಗು ರೀತಿ ನನ್ನನ್ನು ಮಾತನಾಡಿಸುತ್ತಿದ್ದರು. ತುಂಬಾ ಸರಳ ವ್ಯಕ್ತಿತ್ವದವರಾಗಿದ್ದರು. ತೆರೆಯ ಮೇಲೆ ಮಾತ್ರ ಅಲ್ಲ, ತೆರೆಹಿಂದೆಯೂ ಕೂಡ ಸಿಂಪಲ್ ಆಗಿರುತ್ತಿದ್ದರು. ನಿಜ ಜೀವನದಲ್ಲಿ ತುಂಬಾ ಹಾಸ್ಯ ಮಾಡುತ್ತಿದ್ದರು.
ಹಿಂದೊಮ್ಮೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದೇವೆ. ಆಗ ಅವರ ಕಾಲು ಊದಿತ್ತು. ಯಾಕೆ ಅಂತ ಕೇಳಿದ್ದಕ್ಕೆ, ವಯಸ್ಸಾಯ್ತಲ್ಲ ಪುಟ್ಟ ಎಂದಿದ್ದರು. ಮತ್ತೆ ಬ್ಯಾಂಕ್ ಜೊತೆಗೆ ಸಿನಿಮಾ ಹೇಗೆ ಮಾಡ್ತೀರಾ ಎಂದು ಕೇಳಿದ್ದೆ ಅದಕ್ಕೆ ಅವರು ಮಾಡಬೇಕಲ್ಲ ಪುಟ್ಟಿ ಮಾಡ್ತೀನಿ ಎಂದರು. ‘ಶ್’ ಎಂಬ ಸಿನಿಮಾದಲ್ಲಿ ನಾವು ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದೇವೆ.
ಅಂದಹಾಗೆ, ಇಂದು ಸಂಜೆ 4 ಗಂಟೆಯ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಬ್ಯಾಂಕ್ ಜನಾರ್ಧನ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.