ವಿಜಯಪುರ: ಯಾವುದೇ ಸರ್ಕಾರಿ ಕಾಮಗಾರಿ ಇರಲಿ ಸಾಮಾನ್ಯವಾಗಿ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಮುಗಿದ ಮೇಲೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಆದರೆ ವಿಜಯಪುರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುವ ಮುನ್ನವೇ ಕಾಮಗಾರಿ ಪ್ರಾರಂಭಿಸಿ ಕಾಮಗಾರಿ ಸಂಪೂರ್ಣ ಮಾಡಲಾಗಿದೆ.
ಮಹಾನಗರ ಪಾಲಿಕೆ ಇ-ಪ್ರೊಕ್ಯೂರ್ಮೆಂಟ್ ಮುಖಾಂತರ ಆನ್‍ಲೈನ್ ನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿಗಳ ಆರು ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಇವೆಲ್ಲವೂ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆಗಳಾಗಿವೆ. ಈ ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ಜೂನ್ 25 ಇದ್ದು, ಟೆಂಡರ್ ಓಪನ್ ಮಾಡುವ ದಿನಾಂಕವೇ ಜೂನ್ 27 ಎಂದು ಟೆಂಡರ್ ನಲ್ಲಿ ತಿಳಿಸಲಾಗಿದೆ. ಆದರೆ ವಿಚಿತ್ರ ಎಂದರೆ ಟೆಂಡರ್ ಓಪನ್ ಮಾಡುವುದಕ್ಕೂ ಮೊದಲೇ ಇಲ್ಲಿ ಕಾಮಗಾರಿ ನಡೆದಿದೆ.
ಅಷ್ಟೇ ಅಲ್ಲದೆ ಟೆಂಡರ್ ಓಪನ್ ಆಗಿ ಗುತ್ತಿಗೆದಾರನ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಜೂನ್ 12 ರಂದು ಶಂಕು ಸ್ಥಾಪನೆ ಮಾಡಿ ಮುಗಿಸಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಸೇರಿ ಇಲ್ಲಿ ಗೋಲ್ ಮಾಲ್ ನಡೆಸುತ್ತಿದ್ದಾರೆ. ಇದೇ ಗುತ್ತಿಗೆದಾರನಿಗೆ ಟೆಂಡರ್ ಪಾಸ್ ಆಗುತ್ತೆ ಎಂದು ಮುಂಚೇನೆ ಹೇಗೆ ಗೊತ್ತಾಯ್ತು ಅನ್ನೋದು ಸಾರ್ವಜನಿಕರ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಕೋಟ್ಯಂತರ ರೂಪಾಯಿ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆಗೂ ಮುನ್ನವೇ ಅಷ್ಟೊಂದು ತರಾತುರಿಯಲ್ಲಿ ನಗರ ಶಾಸಕರು ಯಾಕೆ ಶಂಕುಸ್ಥಾಪನೆ ನೆರವೇರಿಸಿದರು ಎಂಬ ಸಂಶಯ ಒಂದು ಕಡೆಯಾದ್ರೆ, ಮಹಾನಗರ ಪಾಲಿಕೆ ಆಯುಕ್ತರು ಇಷ್ಟೆಲ್ಲ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ಹೊಂದಾಣಿಕೆಯ ರಹಸ್ಯ ಅಡಗಿದೆಯೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದರ ಬಗ್ಗೆ ಪಾಲಿಕೆ ಆಯುಕ್ತ ಔದ್ರಾಂ ಅವರನ್ನು ಕೇಳಿದಾಗ, ಅದು ನಮ್ಮ ಕಾಮಗಾರಿ ಅಲ್ಲ. ಬೇರೆ ಇಲಾಖೆಯ ಕಾಮಗಾರಿ ನಡೆದಿರಬಹುದು ಎಂದು ಹೇಳಿದ್ದಾರೆ.
ಪಾಲಿಕೆ ಟೆಂಡರ್ ನಲ್ಲಿ ನಮೂದಿಸಿದ ಮಾರ್ಗಗಳಲ್ಲೇ ರಸ್ತೆ ನಡೆದಿದ್ದು, ಆಯುಕ್ತರ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ. ಕಾನೂನನ್ನು ಗಾಳಿಗೆ ತೂರಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಜಿಲ್ಲೆಯವರೇ ಆದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರು ಸಹ ಯಾಕೆ ಮೌನವಹಿಸಿದ್ದಾರೆ ಎಂಬ ಪ್ರಶ್ನೆಯೂ ಮೂಡಿದೆ.