ಕಾರವಾರ: ಉತ್ತರ ಕನ್ನಡ (UttaraKannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿಸಿಲ ವಾತಾವರಣ ಪ್ರಾರಂಭವಾಗುವ ಮುಂಚೆಯೇ ಎಳನೀರು (Tender Coconut) ಅಬ್ಬರದ ಬೆಲೆ ಏರಿಕೆ ಕಂಡಿದೆ.
ಕರಾವಳಿ ಭಾಗದಲ್ಲಿ ಬಿಸಿಲು ಹೆಚ್ಚಿರುವುದರಿಂದ ಎಳನೀರು, ತಂಪು-ಪಾನಿಯಗಳು ಎಥೇಚ್ಛವಾಗಿ ಮಾರಾಟವಾಗುತ್ತದೆ. ಹೀಗಾಗಿ ತಂಪು ಪಾನಿಯಗಳಿಗಿಂತ ಎಳನೀರು ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು ಕಾರವಾರದಲ್ಲಿ ಒಂದು ಎಳನೀರಿಗೆ 50 ರೂ. ದಾಟಿದೆ. ಡಿಸೆಂಬರ್ ಅಂತ್ಯದಲ್ಲಿ 80 ರಿಂದ ನೂರು ರುಪಾಯಿ ಏರುವ ಸಾಧ್ಯತೆಗಳಿವೆ ಎಂದು ಎಳನೀರು ಮಾರಾಟಗಾರರು ಹೇಳುತ್ತಾರೆ.
ಜಿಲ್ಲೆಯ ಯಾವ ಭಾಗದಲ್ಲಿ ಎಷ್ಟು ದರ?: ಕಾರವಾರ, ಅಂಕೋಲ, ಕುಮಟಾ, ಭಟ್ಕಳ, ಹೊನ್ನಾವರದಲ್ಲಿ 50 ರಿಂದ 60 ರೂ. ದರವಿದ್ದು, ಶಿರಸಿ-40, ಸಿದ್ದಾಪುರ – 35 ರಿಂದ 40 ದರವಿದ್ರೆ ಮುಂಡಗೋಡು, ಹಳಿಯಾಳ, ಯಲ್ಲಾಪುರ, ಜೋಯಿಡಾ ಭಾಗದಲ್ಲಿ 40 ರೂ. ದರವಿದೆ. ಇದನ್ನೂ ಓದಿ: ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು
ಕರಾವಳಿಯಲ್ಲಿ ಹೆಚ್ಚು ದರ ಏಕೆ?: ಉತ್ತರ ಕನ್ನಡ ಜಿಲ್ಲೆಗೆ ಶಿವಮೊಗ್ಗ, ತರಿಕೆರೆ, ತುಮಕೂರು ಭಾಗದಿಂದ ಎಳನೀರು ಸರಬರಾಜಾಗುತ್ತದೆ. ಇಲ್ಲಿನ ಸಾಗಾಟ ದರ ಹೆಚ್ಚಾದ್ದರಿಂದ ಗುತ್ತಿಗೆ ಪಡೆದ ವ್ಯಾಪಾರಿಗಳು ಪ್ರತಿ ಎಳನೀರಿನ ದರ 25 ರಿಂದ 28 ವಿಧಿಸುತ್ತಾರೆ. ಆದ್ರೆ ಸ್ಥಳೀಯ ಮಾರಾಟಗಾರರು ಪ್ರತಿ ಎಳನೀರಿಗೆ 50 ರಿಂದ 60 ರಂತೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗಾಗಿ ಕರಾವಳಿ ಭಾಗದಲ್ಲಿ ಎಳನೀರಿನ ದರ ಹೆಚ್ಚಾಗಿದೆ. ಇನ್ನು ಬಿರುಬೇಸಿಗೆ ಬಂತೆಂದರೆ 80 ರೂ.ವರೆಗೂ ಕಾರವಾರದಲ್ಲಿ ಒಂದು ಎಳನೀರು ಮಾರಾಟವಾಗುತ್ತದೆ. ಈ ಬಾರಿ ಹೆಚ್ಚು ಬೇಡಿಕೆ ಇರುವುದರಿಂದ ಜನವರಿ ಅಂತ್ಯದಲ್ಲಿ 80 ರಿಂದ ನೂರರವರೆಗೆ ದರ ಏರುವ ಸಾಧ್ಯತೆಗಳಿವೆ.
ನೀರಾಕ್ಕೂ ಹೆಚ್ಚಿದ ಬೇಡಿಕೆ: ಜಿಲ್ಲೆಯಲ್ಲಿ ತೆಂಗಿನ ಮರದಿಂದ ತೆಗೆದ ನೀರಾಕ್ಕೂ ಹೆಚ್ಚು ಬೇಡಿಕೆ ಇದ್ದು 250 ಮಿಲಿಗೆ 65 ರೂ ಇದೆ. ಮೊದಲು ಕುಮಟಾ ಭಾಗದಲ್ಲಿ ದೊರಕುತಿದ್ದ ನೀರಾ ಈಗ ಗೋವಾ ಭಾಗದಿಂದ ಜಿಲ್ಲೆಗೆ ಸರಬರಾಜಾಗುತಿದ್ದು ಪ್ರವಾಸಿಗರ ಮೆಚ್ಚಿನ ತಾಣವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಳನೀರು ಗ್ರಾಹಕ ಹೊಟ್ಟೆ ತಂಪು ಮಾಡುವ ಬದಲು ಸುಡುತ್ತಿದೆ.