ಬಾಗಲಕೋಟೆ: ಕೂಡಲಸಂಗಮದಲ್ಲಿರುವ ಬಸವಣ್ಣನ ಐಕ್ಯಮಂಟಪ ಶಿಥಿಲಾವಸ್ಥೆಗೆ ಬಂದಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಐಕ್ಯಮಂಟಪದ ಭಕ್ತಾದಿಗಳ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಬಸವಣ್ಣನ ಐಕ್ಯಮಂಟಪದ ಬಾವಿಯಲ್ಲಿ ಬಿರುಕು ಬಿಟ್ಟಿದ್ದು, ಯಾವುದೇ ಅಪಾಯ ಉಂಟಾಗದಿರಲೆಂದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ದುರಸ್ತಿ ಆಗುವರೆಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ ಪಿ.ಎ. ಮೇಘಣ್ಣವರ ತಾತ್ಕಾಲಿಕ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
Advertisement
Advertisement
ಕೃಷ್ಣಾ ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳದಲ್ಲಿ ಈ ಬಸವಣ್ಣನ ಐಕ್ಯಮಂಟಪವಿದೆ. ಬಸವಣ್ಣನ ಐಕ್ಯ ಸ್ಥಳ ರಕ್ಷಣೆ ಹಿನ್ನೆಲೆಯಲ್ಲಿ 1978 ರಲ್ಲಿ ಐಕ್ಯ ಮಂಟಪದ ಬಾವಿ ನಿರ್ಮಾಣ ಮಾಡಲಾಗಿತ್ತು. 1998 ರಲ್ಲಿ ಅಂದಿನ ಜೆ.ಎಚ್. ಪಟೇಲ್ ಸರ್ಕಾರ ಕೂಡಲಸಂಗಮ ಅಭಿವೃದ್ಧಿಗೆ 34 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು.
Advertisement
ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ ಆಗಿದ್ದ ಶಿವಾನಂದ ಜಾಮದಾರ ಐಕ್ಯ ಮಂಟಪದಲ್ಲಿ ಸೇತುವೆ ನಿರ್ಮಾಣ ಹಾಗೂ ಆಧುನೀಕರಣ ಮಾಡುವ ಮೂಲಕ ಅಭಿವೃದ್ಧಿ ಗೊಳಿಸಿದ್ದರು. ನಂತರ ಐಕ್ಯ ಮಂಟಪ ನಿರ್ವಹಣೆಯಲ್ಲಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿತ್ತು.
Advertisement
ಸದ್ಯ ಐಕ್ಯ ಮಂಟಪದಲ್ಲಿ ನೀರು ಬಸಿದು ಬಾವಿಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈಗಾಗಲೇ ಐಕ್ಯ ಮಂಟಪದ ದುರಸ್ಥಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದ್ದು, ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ದುರಸ್ತಿ ಕಾರ್ಯ ಶೀಘ್ರವೇ ಆಗಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.