ಉಡುಪಿ: ಟೆಂಪೋ ಟ್ರಾವೆಲರ್ ಪಲ್ಟಿಯಾಗಿ ಪವಾಡ ಸದೃಶ ರೀತಿಯಲ್ಲಿ 14 ಜನ ಪಾರಾದ ಘಟನೆ ಉಡುಪಿಯ ಸಂತಕಟ್ಟೆ ನಯಂಪಳ್ಳಿ ಸೇತುವೆ ಮೇಲ್ಭಾಗದಲ್ಲಿ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಪೂತ್ತೂರಿನಿಂದ ಸುಮಾರು 14 ಮಂದಿ ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್ ಉಡುಪಿಯ ಸಂತೆಕಟ್ಟೆ ಸಮೀಪದ ನಯಂಪಳ್ಳಿ ಸೇತುವೆ ಸಮೀಪಿಸುತ್ತಿದ್ದಂತೆ ಉರುಳಿ ಬಿದ್ದಿದೆ. ಟಿ.ಟಿ ಒಳಗಡೆ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಂಪೋ ಬೀಳುತ್ತಿದ್ದಂತೆ ಒಳಗಿದ್ದವರು ತಾವೇ ಹೊರಗೆ ಬಂದಿದ್ದಾರೆ. ವಾಹನದ ಮುಂಭಾಗದ ಗಾಜು ಪುಡಿಯಾಗಿದ್ದು ಪ್ರಯಾಣಿಕರಿಗೆ ಗಾಯಗಳಾಗಿದೆ.
ಬೆಳ್ಳಗ್ಗಿನಿಂದ ಮಳೆ ಸುರಿಯುತ್ತಿದ್ದು ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿಯಾಗಿದೆ ಎನ್ನಲಾಗಿದೆ. ಸೇತುವೆ ಮಧ್ಯದಲ್ಲಿಯೇ ವಾಹನ ಪಲ್ಟಿಯಾದ ಕಾರಣ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ವ್ಯತ್ಯಯವಾಯ್ತು. ಉಡುಪಿ ಮತ್ತು ಬ್ರಹ್ಮಾವರ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಟೆಂಪೋವನ್ನು ಎತ್ತಿ ಬದಿಗಿರಿಸಿದರು.
ಕೇರಳ- ಮಂಗಳೂರು- ಉಡುಪಿ- ಕಾರವಾರ ಮಾರ್ಗವಾಗಿ ಗೋವಾ ರಾಜ್ಯಕ್ಕೆ ನೂರಾರು ಮೀನಿನ ವಾಹನ ಸಂಚಾರ ಮಾಡುತ್ತವೆ. ಮೀನಿನ ಎಣ್ಣೆ ರಸ್ತೆ ಮೇಲೆಲ್ಲಾ ಬಿದ್ದು ಜಾರುತ್ತಿರುತ್ತದೆ. ಈ ಪ್ರಕರಣದಲ್ಲಿಯೂ ಚಾಲಕನ ನಿಯಂತ್ರಣ ತಪ್ಪಲು ಮೀನಿನೆಣ್ಣೆ ರಸ್ತೆಗೆ ಬಿದ್ದಿದ್ದೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.