ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೋ ಟ್ರಾವೆಲ್ಲರ್ (Tempo Traveller) ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಅಂದಹಾಗೆ ಇಂಜಿನ್ ರಿಪೇರಿ ಸಮಸ್ಯೆಯಿಂದ ಏರ್‌ಪೋರ್ಟ್ ಒಳಭಾಗದ ಅಲ್ಪಾ ಪಾರ್ಕಿಂಗ್ ಬೇ-71 ರಲ್ಲಿ ಹಲವು ದಿನಗಳಿಂದ ವಿಮಾನವನ್ನ ನಿಲ್ಲಿಸಲಾಗಿತ್ತು. ಇದೇ ವಿಮಾನಕ್ಕೆ ಮುಂಭಾಗದ ಮೂತಿ ಬಳಿ ಟೆಂಪೋ ಟ್ರಾವೆಲ್ಲರ್ ಡಿಕ್ಕಿಯಾಗಿದೆ.
ಘಟನೆಯಲ್ಲಿ ಟೆಂಪೋ ಟ್ರಾವೆಲ್ಲರ್ ವಿಮಾನದ ಮೂತಿ ಭಾಗದ ಕೆಳಗೆ ಸಿಲುಕಿಕೊಂಡು ಟಿಟಿಯ ಟಾಪ್ ಜಖಂ ಆಗಿದೆ. ಘಟನೆಯಲ್ಲಿ ಚಾಲಕನ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯಿಂದ ಪಾರಾಗಿದ್ದಾನೆ ಅಂತ ತಿಳಿದುಬಂದಿದೆ. ರನ್ ವೇಗೆ ಸಿಬ್ಬಂದಿಯನ್ನ ಬಿಟ್ಟು ಬರಬೇಕಾದರೆ ಟಿಟಿ ವಾಹನ ಅಪಘಾತಕ್ಕೀಡಾಗಿದೆ.
ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿ:
ಇನ್ನೂ ಮತ್ತೊಂದು ಪ್ರಕರಣದಲ್ಲಿ ಏರ್‌ಪೋರ್ಟ್‌ನ ಒಳಭಾಗದ ರನ್ ವೇ ಬಳಿ ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂ ಆಗಿದೆ. ಕಾರು ಚಾಲಕ ಗಾಯಗೊಂಡಿದ್ದಾನೆ. ಎರಡು ಪ್ರತ್ಯೇಕ ಪ್ರಕರಣಗಳ ತನಿಖೆಗೆ ಆದೇಶ ಮಾಡಲಾಗಿದೆ.