ಚಿಕ್ಕಬಳ್ಳಾಪುರ: ದೇವಾಲಯಕ್ಕೆ ಸಿಡಿಲು ಬಡಿದ ಪರಿಣಾಮ ದೇವಾಲಯದ ಗೋಪುರ ಛಿದ್ರ-ಛಿದ್ರವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮ ದೇವರಾದ ಶ್ರೀ ಲಕ್ಷ್ಮೀಜನಾರ್ಧನಸ್ವಾಮಿ ದೇಗುಲಕ್ಕೆ ಸಿಡಿಲು ಬಡಿದಿದ್ದು, ಪರಿಣಾಮ ದೇವಾಲಯದ ಗೋಪುರದ ಕಳಸ ಕಿತ್ತು ಬಂದಿದೆ. ಗೋಪುರದ ಬಹುತೇಕ ಭಾಗ ಕಳಚಿದ್ದು ಸಿಡಿಲು ಬಡಿದ ಶಬ್ಧಕ್ಕೆ ಇಡೀ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ.
ಸಿಡಲಿನ ಹೊಡೆತಕ್ಕೆ ದೇವಾಲಯದ ಗೋಡೆಗಳು ಬಿರುಕು ಬಿಟ್ಟಿದ್ದು, ಗೋಡೆ ಹಾಗೂ ನೆಲಹಾಸುಗಳಿಗೆ ಅಳವಡಿಸಿದ್ದ ಟೈಲ್ಸ್ ಗಳು ಕಿತ್ತು ಬಂದಿವೆ. ಸಿಡಿಲಿನ ಶಬ್ಧದಿಂದ ಬೆಚ್ಚಿಬಿದ್ದಿರುವ ಗ್ರಾಮಸ್ಥರು ದೇವಾಲಯದ ಬಳಿ ಬಂದು ನೋಡಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ.
ದೇವಾಲಯದ ಬಹುತೇಕ ಭಾಗ ಹಾನಿಗೆ ಒಳಗಾಗಿದೆ. ಗ್ರಾಮಸ್ಥರನ್ನು ರಕ್ಷಿಸುವ ಸಲುವಾಗಿ ದೇವರೇ ತನ್ನ ಮೇಲೆ ಸಿಡಿಲನ್ನು ಬರ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ದೇವರ ಶಕ್ತಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.