ಬಾಬ್ರಿ ಮಸೀದಿಯಿಂದ ಶುರುವಾದ ಮಂದಿರ-ಮಸೀದಿ ವಿವಾದ ಈಗ ಜ್ಞಾನವಾಪಿವರೆಗೆ ಮುಂದುವರಿದು, ಸಂಬಲ್, ಬದೌನ್ ವರೆಗೂ ಬಂದು ತಲುಪಿದೆ. ಹಲವೆಡೆ ಮುಸ್ಲಿಂ ದೊರೆಗಳು ತಮ್ಮ ಆಳ್ವಿಕೆಯಲ್ಲಿ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಾಣಮಾಡಿದ್ದಾರೆ ಎಂಬ ವಾದ ಕೇಳಿ ಬಂದಿದೆ. ಅದಕ್ಕೆ ಕೆಲವು ಕಡೆ ಸಾಕ್ಷಿಗಳು ಸಿಕ್ಕಿವೆ. ಅವು ಯಾವ ಮಸೀದಿ ಹಾಗೂ ಗತ ಕಾಲದಲ್ಲಿ ನಡೆದ ಘಟನೆಗಳಿಂದ ಈಗ್ಯಾಕೆ ಇಷ್ಟೊಂದು ಕೋಲಾಹಲ ಎಂಬ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.
ಎಲ್ಲೆಲ್ಲಿ ಏನೇನು ವಿವಾದ?
Advertisement
ಬದೌನ್ ಮಸೀದಿ: ಉತ್ತರ ಪ್ರದೇಶದ ಸಂಭಲ್ ಮಸೀದಿ ವಿವಾದದ ಬೆನ್ನಲ್ಲೇ ಬದೌನ್ ಜಿಲ್ಲೆಯ ಮಸೀದಿಯೊಂದು ವಿವಾದದ ಕೇಂದ್ರವಾಗಿದೆ. ಮೊಘಲ್ ದೊರೆಗಳು ಶಿವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ಹಿಂದೂ ಪರ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದಾರೆ. ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಅಮಿತ್ ಕುಮಾರ್ ಅವರು ಈ ಕುರಿತು ವಿಚಾರಣೆ ನಡೆಸಿದ್ದಾರೆ. ಈ ಅರ್ಜಿಯ ವಿಚಾರಣೆ ಡಿ.17ಕ್ಕೆ ಮುಂದೂಡಿಕೆಯಾಗಿದೆ.
Advertisement
ಸಂಬಲ್‌ನ ಶಾಹಿ ಜಾಮಾ ಮಸೀದಿ: ಸಂಬಲ್‌ನ ಶಾಹಿ ಜಾಮಾ ಮಸೀದಿ ಹಿಂದೆ ದೇವಾಲಯವಾಗಿತ್ತು. ಹರಿಹರನ ದೇಗುಲದಲ್ಲಿ ಈಗ ನಮಾಜ್ ನಡೆಯುತ್ತಿದೆ. 15ನೇ ಶತಮಾನದವರೆಗೂ ಮಂದಿರವಾಗಿದ್ದ ಜಾಗವು ಮಸೀದಿಯಾಗಿ ಪರಿವರ್ತನೆ ಆಗಿದೆ ಎಂದು ಉತ್ತರ ಪ್ರದೇಶ ಕೋರ್ಟ್‌ಗೆ ಮನವಿ ಸಲ್ಲಿಕೆಯಾಗಿದೆ. ಮಸೀದಿಯಲ್ಲಿ ಫೋಟೊ, ವಿಡಿಯೋ ಒಳಗೊಂಡ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸಂಭಲ್‌ನ ಸಿವಿಲ್ ಕೋರ್ಟ್ ಹೇಳಿತ್ತು. ಆದರೆ ಸಮೀಕ್ಷೆಗೆ ತೆರಳಿದ್ದ ವೇಳೆ ಕಲ್ಲು ತೂರಾಟ ನಡೆದು ಘರ್ಷಣೆ ಉಂಟಾಗಿತ್ತು. ಈಗ ಮಧ್ಯ ಪ್ರವೇಶಿಸಿರುವ ಸುಪ್ರೀಂ ಕೋರ್ಟ್, ಸಿವಿಲ್ ಕೋರ್ಟ್ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಈ ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದರು.
Advertisement
Advertisement
ಸಂಭಲ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಹಾಗೇ ಮುಂದಿನ ವಿಚಾರಣೆಯನ್ನು 2025ರ ಜ.6ಕ್ಕೆ ನಿಗದಿ ಪಡಿಸಿದೆ. ಈಗಾಗಲೇ ಆಗಿರುವ ಸರ್ವೇ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.
ಸಂಭಲ್‌ನಲ್ಲಿ ಮೊಘಲ್ ಸಾಮ್ರಾಟ ಬಾಬರ್ 1526ರಲ್ಲಿ ಮಸೀದಿಯನ್ನು ಕಟ್ಟಿಸಿದ ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ. ಹರಿಹರ ದೇವಾಲಯವನ್ನು ಕೆಡವಿ ಅದೇ ಜಾಗದಲ್ಲಿ ಮಸೀದಿ ನಿರ್ಮಿಸಿರುವುದಾಗಿ ಆರೋಪಿಸಲಾಗಿದೆ.
ಜ್ಞಾನವಾಪಿ ಮಸೀದಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿ ಇದೆ. ಇಂದೋರ್‌ನ ರಾಣಿ ಅಹಲ್ಯಾಬಾಯಿ ಹೋಳ್ಕರ್ 1780ರಲ್ಲಿ ನಿರ್ಮಿಸಿದ ಕಾಶಿ ವಿಶ್ವನಾಥ ದೇವಾಲಯದಿಂದ ಇದು ಸ್ವಲ್ಪ ದೂರದಲ್ಲಿದೆ. ಈ ಮಸೀದಿ ವಿಶ್ವೇಶ್ವರ ದೇವಾಲಯದ ಅವಶೇಷಗಳ ಮೇಲೆ ನಿಂತಿದೆ ಎನ್ನಲಾಗಿದೆ. 12ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್ ಇದನ್ನು ನಾಶ ಮಾಡಿದ ಎನ್ನಲಾಗಿದೆ. ಈ ವಿವಾದ ಸಂಬಂಧ ಸರ್ವೆ ನಡೆದಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಭೋಜ ಶಾಲಾ-ಕಮಲ್ ಮೌಲಾ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಈ ಸ್ಥಳವಿದೆ. 1034ರಲ್ಲಿ ಮಧ್ಯಪ್ರದೇಶದ ಧಾರ್‌ನಲ್ಲಿ ವಾಗ್ದೇವಿ ದೇಗುಲ ನಿರ್ಮಾಣ ಮಾಡಲಾಗಿತ್ತು. ಅಲ್ಲಾವುದ್ದೀನ್ ಖಿಲ್ಜಿ 13ನೇ ಶತಮಾನದಲ್ಲಿ ಮಸೀದಿ ನಿರ್ಮಿಸಿದ್ದ ಎಂಬುದು ಹಿಂದೂಗಳ ವಾದ. ಇನ್ನೂ ದೇಗುಲ ನಾಶ ಆಗಿರಲಿಲ್ಲ. 1291ರಲ್ಲಿ ಮೌಲಾ ಕಮಾಲುದ್ದೀನ್ ಚಿಸ್ತಿ ಎಂದ ಸೂಫಿ ಸಂತ ಅಲ್ಲಿಗೆ ಬಂದಿದ್ದ. ಆತನ ಕಾಲಾನಂತರ ಮಸೀದಿ ಜತೆಗೆ ಸಮಾಧಿ ನಿರ್ಮಿಸಲಾಗಿದೆ ಎಂಬುದು ಮುಸ್ಲಿಮರವಾದವಾಗಿದೆ.
ಬಿಜಾ ಮಂಡಲ್ ಮಸೀದಿ: ಮಧ್ಯಪ್ರದೇಶದ ವಿದಿಶಾದಲ್ಲಿರುವ ಧಾರ್ಮಿಕ ಸ್ಥಳ ಇದಾಗಿದೆ. ಇಲ್ಲಿರುವುದು ವಿಜಯ ಸೂರ್ಯ ಮಂದಿರವಾಗಿದೆ. 11ನೇ ಶತಮಾನದಲ್ಲಿ ಚಾಲುಕ್ಯ ರಾಜ ಮನೆತನಕ್ಕೆ ಸೇರಿದ ವಾಚಸ್ಪತಿ ಇಲ್ಲಿ ಭವ್ಯವಾದ ಸೂರ್ಯ ಮಂದಿರವನ್ನು ನಿರ್ಮಾಣ ಮಾಡಿದ್ದ ಇದು ಹಿಂದೂ ಸಮುದಾಯಕ್ಕೆ ಸೇರಿದ ಸ್ಥಳ ಎಂಬುದು ಹಿಂದೂಗಳವಾದ. ಇನ್ನೂ 1951ರ ಗೆಜೆಟ್ ಪ್ರಕಾರ ಅದು ಸಮುದಾಯಕ್ಕೆ ಸೇರಿದ್ದು. ಅದು ದೇಗುಲಕ್ಕೆ ಸೇರಿದ ಜಾಗ ಅಲ್ಲ. ಅಲ್ಲಿ ಸರ್ಕಾರದ ವತಿಯಿಂದಲೇ ಮಸೀದಿ ನಿರ್ಮಿಸಲಾಗಿದೆ ಎಂಬುದು ಮುಸ್ಲಿಮರ ವಾದವಾಗಿದೆ.
ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ: ಉತ್ತರಪ್ರದೇಶದ ಮಥುರಾದಲ್ಲಿರುವ ಸ್ಥಳ ಇದಾಗಿದೆ. ಕೃಷ್ಣನ ಜನ್ಮಸ್ಥಳವಾಗಿರುವ ಮಥುರಾದಲ್ಲಿ ದೇಗುಲ ನಿರ್ಮಾಣವಾಗಿತ್ತು. ಅದನ್ನು ಕೆಡವಿ ಹಾಕಿ ಒಟ್ಟು 13.37 ಎಕ್ರೆ ಪ್ರದೇಶದಲ್ಲಿ ಕಾಲಾನಂತರದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಹಿಂದೂಗಳ ವಾದವಾಗಿದೆ. ಮಸೀದಿ ಎನ್ನುವುದು ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಿಲ್ಲ. 1968ರ ಒಪ್ಪಂದದ ಪ್ರಕಾರ ಜಮೀನಿನ ಆಂಶಿಕ ಭಾಗವನ್ನು ಮಸೀದಿ ಆಡಳಿತ ಮಂಡಳಿಗೆ ನೀಡಿತ್ತು ಎಂಬುದು ಮಸ್ಲಿಮರ ವಾದವಾಗಿದೆ.
ತಾಜ್‌ಮಹಲ್: ಆಗ್ರಾದಲ್ಲಿರುವುದು ತಾಜ್ ಮಹಲ್ ಅಲ್ಲ, ತೇಜೋಆಲಯ ಎಂಬುದು ಕೆಲವರ ವಾದ. ಈ ಸಂಬಂಧ ಅಲಹಾಬಾದ್ ಹೈಕೋರ್ಟ್‌ಗೆ ಬಿಜೆಪಿ ನಾಯಕ ರಜನೀಶ್ ಸಿಂಗ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರು ತಮ್ಮ ಅರ್ಜಿಯಲ್ಲಿ ತಾಜ್‌ಮಹಲ್ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯಿಂದ ಸರ್ವೇ ನಡೆಸಬೇಕು. ಮುಚ್ಚಿರುವ 22 ಕೋಣೆಗಳ ಒಳಗೆ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ತಿರಸ್ಕರಿಸಿರುವ ಕೋರ್ಟ್, ಈ ಕುರಿತಂತೆ ಇತಿಹಾಸಕಾರರು ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದೆ.
ಕುತುಬ್ ಮಿನಾರ್: 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ, ಕುತುಬ್ ಮಿನಾರ್‌ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ದಿನಗಳಂದು ಪೂಜೆ ಮಾಡಬಹುದು ಎಂದು ಆದೇಶ ನೀಡಿದೆ. ಅಂದರೆ ಹಿಂದೂಗಳ ಪ್ರಕಾರ, ಕುತುಬ್ ಮಿನಾರ್ ಅಂದರೆ ಸರಸ್ವತಿ ದೇಗುಲವಾಗಿದ್ದು, ಇದನ್ನು ಬೋಜಶಾಲೆ ಎಂದು ಕರೆಯಲಾಗುತ್ತದೆ. ಆದರೆ ಮುಸ್ಲಿಮರು ಇದು ಮಸೀದಿಯೇ ಎಂದು ಹೇಳುತ್ತಿದ್ದಾರೆ ಎಂದು ವಾದಿಸುತ್ತಿವೆ. 2021ರ ನವೆಂಬರ್‌ನಲ್ಲಿ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸ್ಥಳೀಯ ಕೋರ್ಟ್ ತಿರಸ್ಕರಿಸಿತ್ತು.
ಜಾಮೀಯಾ ಮಸೀದಿ: ಕೇವಲ ಉತ್ತರ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿಯೂ ಕೆಲವು ವಿವಾದಗಳಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮೀಯಾ ಮಸೀದಿ ಹಿಂದೆ ಹನುಮಾನ್ ದೇಗುಲವಾಗಿತ್ತು. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ ಸ್ಥಳದ ಪರಿಶೀಲನೆ ನಡೆಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೇ, ಟಿಪ್ಪು ಸುಲ್ತಾನ್ ಕಾಲದಲ್ಲಿ ಇಲ್ಲಿದ್ದ ಹನುಮಾನ್ ದೇಗುಲವನ್ನು ಕೆಡವಿ, ಇಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿದ್ದವು.
ಮಳಲಿ ಮಸೀದಿ ಕಟ್ಟಡ: ಮಂಗಳೂರು ತಾಲೂಕಿನ ಗಂಜೀಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿ ಪೇಟೆಯ ಮಸೀದಿ ಸ್ಥಳದಲ್ಲಿ ಪ್ರಾಚೀನ ದೇವಸ್ಥಾನದ ಮಾದರಿಯನ್ನು ಹೋಲುವ ರಚನೆ ಕಾಣಿಸಿದೆ. ಮಸೀದಿಯನ್ನು ನವೀಕರಿಸುವ ಉದ್ದೇಶಕ್ಕಾಗಿ ಕೆಲಸ ನಡೆಯುತ್ತಿದ್ದ ವೇಳೆ ದೇಗುಲ ಮಾದರಿಯ ರಚನೆ ಕಾಣಿಸಿತ್ತು. ಅನಂತರ ವಿವಿಧ ಸಂಘಟನೆಗಳು, ಪೊಲೀಸರು ಭೇಟಿ ನೀಡಿದ್ದು, ತತ್‌ಕ್ಷಣದಿಂದಲೇ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಕೆಲವರು ಇದೊಂದು ದೇಗುಲದ ರಚನೆ ಎಂದಿದ್ದಾರೆ. ಇನ್ನು ಕೆಲವರು ಇದೊಂದು ಬಸದಿಯ ರಚನೆಯಂತೆ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲಿ ಸದ್ಯ ಯಾವುದೇ ಕಾಮಗಾರಿ ನಡೆಸದಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ನಡುವೆ ಕೋರ್ಟ್‌ಗೆ ಕೂಡ ದೂರು ನೀಡಲಾಗಿದ್ದು, ಅಲ್ಲಿ ತಡೆ ಯಾಜ್ಞೆ ನೀಡಲಾಗಿತ್ತು. ಇದು ವಿಚಾರಣೆ ಹಂತದಲ್ಲಿದೆ.
‘1991ರ ಪೂಜಾ ಸ್ಥಳಗಳ ಕಾಯ್ದೆ
‘1991ರ ಪೂಜಾ ಸ್ಥಳಗಳ ಕಾಯ್ದೆ’ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸುವಂತಿಲ್ಲ. ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ರೀತಿ ನಿಯಮ ರೂಪಿಸಿ ಕೇಂದ್ರ ಸರ್ಕಾರವು ಜುಲೈ 11, 1991ರಂದು ಕಾಯ್ದೆ ರೂಪಿಸಿ ಜಾರಿಗೆ ತಂದಿತ್ತು.
ಈ ಕಾಯ್ದೆಯ 4ನೇ ವಿಧಿಯ ಅನ್ವಯ, ಆಗಸ್ಟ್ 15, 1947ಕ್ಕೆ ಮುನ್ನ ಯಾವುದೇ ಧಾರ್ಮಿಕ ಸ್ಥಳದ ‘ಧಾರ್ಮಿಕ ಸ್ವರೂಪ’ ಬದಲಾಯಿಸಿ ಎಂದು ದೇಶದ ಯಾವುದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಅದು ವಿಚಾರಣೆಯ ಯಾವ ಹಂತದಲ್ಲಿ ಇದ್ದರೂ ರದ್ದುಪಡಿಸಬೇಕು. ಹೊಸ ಅರ್ಜಿಗಳನ್ನಂತೂ ಸ್ವೀಕರಿಸುವಂತೆಯೇ ಇಲ್ಲ.
‘1991ರ ಪೂಜಾ ಸ್ಥಳಗಳ ಕಾಯ್ದೆ’ಯ 3ನೇ ವಿಧಿಯ ಪ್ರಕಾರ, ಯಾವುದೇ ಧಾರ್ಮಿಕ ಸ್ಥಳದ ಯಾವುದೇ ಧಾರ್ಮಿಕ ವಿಧಿ ವಿಧಾನವನ್ನೂ ಬದಲಿಸುವಂತಿಲ್ಲ. ಪೂಜಾ ವಿಧಿ ವಿಧಾನವನ್ನು ಮಾರ್ಪಡಿಸುವಂತಿಲ್ಲ. ಅದೇ ಧರ್ಮದ ಬೇರೆ ಪಂಗಡದ ವಿಧಿ ವಿಧಾನವನ್ನೂ ಆಚರಿಸುವಂತಿಲ್ಲ.
ಆದರೆ, ಯಾವುದೇ ಧಾರ್ಮಿಕ ಸ್ಥಳವು ಪ್ರಾಚೀನವಾಗಿದ್ದರೆ, ಐತಿಹಾಸಿಕ ಸ್ಮಾರಕವಾಗಿದ್ದರೆ, ಪ್ರಾಚ್ಯವಸ್ತು, ಪುರಾತತ್ವ ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರದೇಶವಾದರೆ, ಅದು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ.
1991ರ ಪೂಜಾ ಸ್ಥಳಗಳ ಕಾಯ್ದೆ’ ಜಾರಿಗೆ ತಂದಿದ್ದು ಏಕೆ..?
1991ರಲ್ಲಿ ಅಂದಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಸಂಪುಟದ ಗೃಹ ಸಚಿವ ಶಂಕರ್ ರಾವ್ ಭವರ್‌ರಾವ್ ಚೌಹಾಣ್ ಅವರು ಈ ಕಾಯ್ದೆಯಲ್ಲಿ ಸಂಸತ್‌ನಲ್ಲಿ ಮಂಡಿಸಿ, ಅಂಗೀಕಾರ ಪಡೆದ ಬಳಿಕ ಕಾನೂನು ಜಾರಿಯಾಗಿತ್ತು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಕೈಗೊಂಡಿದ್ದ ರಾಮಜನ್ಮಭೂಮಿ ರಥಯಾತ್ರೆಗೆ ಆ ದಿನಗಳಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಈ ವೇಳೆ, ಕೋಮು ಸೌಹಾರ್ದತೆ ಕಾಪಾಡುವ ಸಲುವಾಗಿ ಕಾಯ್ದೆ ಜಾರಿಗೆ ತಂದಿದ್ದಾಗಿ ಪಿ. ವಿ. ನರಸಿಂಹ ರಾವ್ ಸರ್ಕಾರ ಹೇಳಿಕೊಂಡಿತ್ತು.
ಪೂಜಾ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಕಾಯ್ದೆಯ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.