– ವಾಲ್ಮೀಕಿ ಮೂರ್ತಿ ಜೊತೆ ಸುದೀಪ್ ಮೂರ್ತಿ ಪ್ರತಿಷ್ಠಾಪನೆ
– 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನ
ರಾಯಚೂರು: ದೇವರಿಗೆ ಪೂಜಿಸಲು ಗುಡಿ ಕಟ್ಟಿಸುತ್ತಾರೆ, ದೇವರಿಗೆ ಸಮನಾದ ತಂದೆ, ತಾಯಿಗಳಿಗೆ ಪೂಜಿಸಲು ದೇವಾಲಯಗಳನ್ನೂ ಕಟ್ಟಿಸಿದವರಿದ್ದಾರೆ. ಆದರೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದ ಗ್ರಾಮದ ಜನ ತಮ್ಮ ನೆಚ್ಚಿನ ಸಿನಿಮಾ ನಟ ಕಿಚ್ಚ ಸುದೀಪ್ ಅವರ ಮೂರ್ತಿ ಪ್ರತಿಷ್ಠಾಪಿಸಿ ದೇವಸ್ಥಾನ ಕಟ್ಟಿ ನಿತ್ಯ ಪೂಜಿಸಲು ಮುಂದಾಗಿದ್ದಾರೆ.
ತಮಿಳುನಾಡಿನಲ್ಲಿ ಹಲವಾರು ಸಿನೆಮಾ ನಟರ ದೇವಾಲಯಗಳನ್ನು ಅವರ ಅಭಿಮಾನಿಗಳು ಕಟ್ಟಿಸಿರುವ ಉದಾಹರಣೆಗಳಿವೆ. ಆದರೆ ರಾಜ್ಯದ ಮಟ್ಟಿಗೆ ಇದು ತೀರಾ ವಿರಳ. ಕುರಕುಂದ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ಅವರ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಇದು ಅಚ್ಚರಿ ಅನ್ನಿಸಿದ್ರು ಸತ್ಯ. ಕುರಕುಂದ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಟ ಸುದೀಪ್ ಅಭಿಮಾನಿಗಳಿದ್ದಾರೆ. ಹೀಗಾಗಿ ನೆಚ್ಚಿನ ನಟನಿಗೆ ದೇವಸ್ಥಾನ ಕಟ್ಟುವ ಮೂಲಕ ಗೌರವ ಸಲ್ಲಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಮೂರ್ನಾಲ್ಕು ಬಾರಿ ಕಿಚ್ಚ ಅವರನ್ನು ಭೇಟಿಯಾಗಿ ಅನುಮತಿಯನ್ನು ಪಡೆದಿದ್ದಾರೆ. ಸುದೀಪ್ ರಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ, 30*40 ವಿಸ್ತೀರ್ಣದ ಜಾಗದಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ಸುದೀಪ್ ಹಾಗೂ ವಾಲ್ಮೀಕಿ ಮಹರ್ಷಿಯ ದೇವಸ್ಥಾನ ಕಟ್ಟಿಸಲಾಗುತ್ತಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು
ಇಲ್ಲಿ ಸುದೀಪ್‍ರ 4 ಅಡಿ ಮೂರ್ತಿ ಹಾಗೂ ವಾಲ್ಮೀಕಿ ಮಹರ್ಷಿಯ 6 ಅಡಿ ಮೂರ್ತಿಯನ್ನು ಈಗಾಗಲೇ ಪ್ರತಿಷ್ಠಾಪಿಸಲಾಗಿದೆ. ಕುರಕುಂದ ಗ್ರಾಮದ ಕೆಲ ಮುಖಂಡರು ಹಾಗೂ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಸುದೀಪ್ ಮೂರ್ತಿ ಎದುರು ಇತ್ತೀಚೆಗೆ ಅಭಿಮಾನಿಗಳನ್ನಗಲಿದ ದಿವಂಗತ ನಟ ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ಎಲ್‍ಇಡಿ ರೂಪದಲ್ಲಿ ಅಳವಡಿಸುವ ಮೂಲಕ, ಪವರ್ ಸ್ಟಾರ್ ಸ್ಮರಣೆ ಮಾಡಲಾಗುತ್ತಿದೆ. ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಕ್ಕಾಗಿ ಅರ್ಚಕರನ್ನೂ ನೇಮಿಸಲಾಗುತ್ತಿದೆ. ಇದನ್ನೂ ಓದಿ: ‘ಅಪ್ಪುಶ್ರೀ’ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಬರಿಗಾಲಲ್ಲಿ ಪಾದಯಾತ್ರೆ
ಈಗಾಗಲೇ 75 ದಿನಗಳ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಯಾನವನ, ಗ್ಲಾಸ್ ವರ್ಕ್ ಹಾಗೂ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಖುದ್ದು ಕಿಚ್ಚ ಸುದೀಪ್ ಭಾಗಿಯಾಗಲಿದ್ದಾರೆ. ಹೀಗಾಗಿ ನೆಚ್ಚಿನ ನಟನನ್ನು ಕಣ್ತುಂಬಿಸಿಕೊಳ್ಳಲು ಇಡೀ ಅಭಿಮಾನಿ ಬಳಗವೇ ಕಾತುರದಿಂದ ಕಾಯುತ್ತಿದೆ.