ರಾತ್ರೋರಾತ್ರಿ ಇತಿಹಾಸ ಪ್ರಸಿದ್ಧ ಪಿಲಿಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಭಂಡಾರಮನೆ ಧ್ವಂಸ

Public TV
2 Min Read
PILICHAMUNDI TEMPLE 2

ಮಂಗಳೂರು: ಬಣ ಸಂಘರ್ಷದಿಂದ ತುಳುನಾಡಿನ ಪುರಾಣ ಪ್ರಸಿದ್ಧ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನದ (Pilichamundi Daivasthana) ನಿರ್ಮಾಣ ಹಂತದ ಕಟ್ಟಡವನ್ನು ರಾತ್ರೋರಾತ್ರಿ ಜೆಸಿಬಿ ಮೂಲಕ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.

ಕಿಡಿಗೇಡಿಗಳ ಕೃತ್ಯಕ್ಕೆ ದೈವಸ್ಥಾನದ ನೂತನ ಭಂಡಾರಮನೆ ಸಂಪೂರ್ಣ ಧ್ವಂಸವಾಗಿದೆ. ದೈವಸ್ಥಾನದ ಆಡಳಿತ ಮಂಡಳಿ ವಿವಾದದ ಸಂಘರ್ಷದಲ್ಲಿ ಕಟ್ಟಡ ಧ್ವಂಸವಾಗಿರುವ ಶಂಕೆ ವ್ಯಕ್ತವಾಗಿದೆ. ಎರಡು ಬಣಗಳ ಗುದ್ದಾಟವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಬೇರೆ ರಾಜ್ಯಗಳಲ್ಲಿ ಬಿಜೆಪಿ ಎಷ್ಟೆಷ್ಟು ಇನ್ವೆಸ್ಟ್‌ಮೆಂಟ್ ಮಾಡಿದೆ ಎಂಬುದನ್ನು ಬಹಿರಂಗ ಪಡಿಸಲಿ – ಸ್ವಪಕ್ಷಕ್ಕೆ ಹೆಬ್ಬಾರ್ ಸವಾಲು

PILICHAMUNDI TEMPLE 1

ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ (Muzrai Department) ಸೇರುವ ಕೊಂಡಾಣ ದೈವಸ್ಥಾನ, ಸದ್ಯ ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದೆ. ಭಂಡಾರ ಮನೆಯಲ್ಲಿ ಕ್ಷೇತ್ರದ ದೈವಗಳ 15 ಕೋಟಿ ರೂ. ಮೌಲ್ಯಕ್ಕೂ ಮೀರಿದ ಬೆಲೆಬಾಳುವ ಒಡವೆಗಳಿವೆ. ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಯತ್ನಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಖಾಸಗಿ ಭಂಡಾರಮನೆಯವರು ಸಮ್ಮತಿ ನೀಡಿರಲಿಲ್ಲ.

ಈ ಹಿನ್ನಲೆ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣಕ್ಕೆ ವ್ಯವಸ್ಥಾಪನಾ ಸಮಿತಿ ಮುಂದಾಗಿತ್ತು. ದೈವಸ್ಥಾನದ ಪಕ್ಕದ ಜಾಗದಲ್ಲಿ ಕಳೆದ ಜ.8 ರಂದು ಆಗಿನ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ನೇತೃತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ 80% ಕಾಮಗಾರಿ ಪೂರ್ಣಗೊಂಡಿತ್ತು. ಇದರ ನಡುವೆ ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದ ಹಿನ್ನೆಲೆ, ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಎರಡು ದಿನಗಳ ಹಿಂದಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರಿಸಿದ್ದರು.

PILICHAMUNDI TEMPLE

ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಕಿಡಿಗೇಡಿಗಳು ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆ ನೆಲಸಮ ಮಾಡಿದ್ದಾರೆ. ಘಟನೆ ಬೆನ್ನಲ್ಲೇ ಎರಡು ಬಣಗಳ ನಡುವೆ ಸಂಘರ್ಷ ತಾರಕಕ್ಕೆ ಏರಿದೆ. ನೂರಾರು ವರ್ಷಗಳಿಂದ ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಇರುವ ಒಡವೆಗಳು, ಕಾರ್ಣಿಕ ದೈವದ ಕೋಟ್ಯಂತರ ರೂ. ಒಡವೆಗಳ ಅಧಿಪತ್ಯಕ್ಕಾಗಿ ಸಂಘರ್ಷ ಶುರುವಾಗಿದೆ. ದೈವಗಳ ಸಮ್ಮುಖದಲ್ಲಿ ಬಗೆಹರಿಯಬೇಕಾದ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೈವಸ್ಥಾನದ ಭಕ್ತರ ಜಮಾವಣೆ ಹಿನ್ನೆಲೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಉಳ್ಳಾಲ ಪೊಲೀಸರು ಸೇರಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.

ಈ ಸಂಬಂಧ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಉಳ್ಳಾಲ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ, ನೆಮ್ಮದಿಯ ಭರವಸೆ: ಆರ್.ಅಶೋಕ್

Share This Article