ಬೆಳಗಾವಿ: ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪಿದ್ದ ಬಹುಕೋಟಿ ಛಾಪಾಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ತೆಲಗಿ ಮೃತದೇಹದ ಮುಂದೆಯೇ ಕುಟುಂಬಸ್ಥರು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತೆಲಗಿ ಮರಣ ನಂತರ ಆತನ ಮೃತದೇಹವನ್ನು ನೋಡಲು ಬಂದ ತೆಲಗಿ ಸಹೋದರ ಅಜಿಂ ತೆಲಗಿ ಹಾಗೂ ಮಗಳು ಸನ್ನಾ ಮಧ್ಯೆ ತೀವ್ರ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
ತೆಲಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಯಾರೂ ನಮ್ಮನ್ನು ನೋಡಲು ಬಂದಿರಲಿಲ್ಲ ಎಂದು ಆರೋಪಿಸಿರುವ ಸನ್ನಾ, ತೆಲಗಿ ಮೃತ ದೇಹದ ಅಂತಿಮ ದರ್ಶನ ಪಡೆಯಲು ಬಂದ ಅಜಿಂ ತೆಲಗಿ ಅವರಿಗೆ ಈಗ ನಿಮ್ಮ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸನ್ನಾ ಅವರ ಮಾತುಗಳಿಂದ ಬೇಸತ್ತ ಅಜಿಂ ತೆಲಗಿ ತಕ್ಷಣ ಮನೆಯಿಂದ ಹೊರನಡೆದಿದ್ದಾರೆ.
ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಮೃತಪಟ್ಟ ತೆಲಗಿ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬೆಳಗಾವಿಯ ಖಾನಾಪುರದ ವಿದ್ಯಾನಗರದ ಮನೆಗೆ ಕೊಂಡೊಯ್ಯಲಾಗಿತ್ತು. ತೆಲಗಿಯ ಅಂತಿಮ ದರ್ಶನದ ವ್ಯವಸ್ಥೆಯನ್ನು ಇಂದು 10 ಗಂಟೆಯ ವರೆಗೆ ಖಾನಾಪುರದಲ್ಲಿ ಏರ್ಪಡಿಸಲಾಗಿದ್ದು, ನಂತರ ಮುಸ್ಲಿಂ ಸಾಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
2006ರ ಜನವರಿ 17ರಂದು ನಕಲಿ ಛಾಪಾಕಾಗದ ಹಗರಣದಲ್ಲಿ ತೆಲಗಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ: ತೆಲಗಿ ಬದುಕಿದ್ದರೆ ಇನ್ನು 12 ದಿನಗಳಲ್ಲಿ ಜೈಲಿಂದ ಹೊರಬರುತ್ತಿದ್ದನಂತೆ!