LatestMain PostNational

ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

Advertisements

ನವದೆಹಲಿ: ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯಗಳನ್ನು ಕಲ್ಪಿಸದಿದ್ದಲ್ಲಿ ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳನ್ನು ಮುಚ್ಚುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನವರಿ ಅಂತ್ಯದ ವೇಳೆಗೆ ಕಂಪನಿಯು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಹಣವನ್ನು ಪಾವತಿಸಬೇಕಿದ್ದು, ಈ ಕುರಿತು ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

ಮುಖೇಶ್ ಅಂಬಾನಿಯವರ ರಿಲಾಯನ್ಸ್ ಜಿಯೋ ಕಡಿಮೆ ಬೆಲೆಯ ಡೇಟಾ ಹಾಗೂ ಕರೆಯ ಸೌಲಭ್ಯ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಹೀಗಾಗಿ ಜಿಯೋಗೆ ಸ್ಪರ್ಧೆಯೊಡ್ಡಲು ಇತರೆ ಕಂಪನಿಗಳು ಸಹ ದರ ಕಡಿಮೆ ಮಾಡಬೇಕಾಯಿತು. ಇದರ ಭಾಗವಾಗಿ ಬಿರ್ಲಾ ಅವರ ಐಡಿಯಾ ಹಾಗೂ ಬ್ರಿಟಿಷ್ ಮೂಲದ ಟೆಲಿಕಾಂ ಕಂಪನಿ ವೊಡಾಫೋನ್ ಕಳೆದ ವರ್ಷ ವಿಲೀನಗೊಂಡಿತ್ತು. ನಂತರ ಕರೆ ಹಾಗೂ ಡೇಟಾ ದರಗಳನ್ನು ಕಡಿಮೆ ಮಾಡಿದ್ದವು. ಇದನ್ನೂ ಓದಿ: ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

ಈ ವೇಳೆ ಕಂಪನಿಗೆ 1.17 ಲಕ್ಷ ರೂ. ನಷ್ಟ ಉಂಟಾಗಿತ್ತು. ಈ ಮಧ್ಯೆ 14 ವರ್ಷಗಳಿಂದ ತೆರಿಗೆ ಹಾಗೂ ಸ್ಪೆಕ್ಟ್ರಂ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವುದನ್ನು ಕಂಪನಿಗಳು ಪಾವತಿಸಬೇಕೆಂಬ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ನಂತರ ಸರ್ಕಾರಕ್ಕೆ ಹಣ ಪಾವತಿಸುವಂತೆ ಸುಪ್ರೀಂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಕೆಲವು ವಾರಗಳ ಹಿಂದೆ ಟೆಲಿಕಾಂ ವಲಯ ಅತಿ ಹೆಚ್ಚು ನಷ್ಟವನ್ನು ದಾಖಲಿಸಿದೆ. ಹೀಗಾಗಿ ಇಷ್ಟು ಪ್ರಮಾಣದ ಮೊತ್ತವನ್ನು ಗಡುವಿನೊಳಗೆ ಸರ್ಕಾರಕ್ಕೆ ಹೇಗೆ ಪಾವತಿಸುವುದು ಎಂಬುದು ಕಂಪನಿಗಳ ಮುಖ್ಯಸ್ಥರನ್ನು ಚಿಂತೆಗೀಡು ಮಾಡಿದೆ.

ಭಾರೀ ನಷ್ಟದ ನಡುವೆಯೂ ಇಷ್ಟೊಂದು ಮೊತ್ತದ ಹಣವನ್ನು ನಮ್ಮಿಂದ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ದಂಡ ಹಾಗೂ ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕೆಂದು ಟೆಲಿಕಾಂ ಸಂಸ್ಥೆಗಳಾದ ಏರ್‍ಟೆಲ್ ಹಾಗೂ ವೊಡಾಫೊನ್ ಕೋರ್ಟ್ ಮೊರೆ ಹೋಗಿವೆ. ಅಲ್ಲದೆ ಸುಪ್ರೀಂ ಕೋರ್ಟ್‍ನಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಹ ಸಲ್ಲಿಸಿವೆ. ಇದನ್ನೂ ಓದಿ: ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.

ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

ಭಾರತಿ ಏರ್ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.

Leave a Reply

Your email address will not be published.

Back to top button